ಬೆಂಗಳೂರು: ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ನ್ಯೂನತೆಗಳನ್ನು ಮುಚ್ಚಿಡಲು, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಆಗದೆ ಇರುವುದನ್ನು ಮುಚ್ಚಿಟ್ಟುಕೊಳ್ಳಲು ಹಾಗೂ ಆಡಳಿತ ಪಕ್ಷದ ಶಾಸಕರಿಗೆ ಅನುದಾನ ಕೊಡಲು ಆಗದೆ ಇರುವುದನ್ನು ಮುಚ್ಚಿಡಲು ಕೇಂದ್ರ ಸರಕಾರದ ವಿರುದ್ಧ ಅನುದಾನ ಕೊಡುತ್ತಿಲ್ಲ ಎಂದು ಟೀಕಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ ಅವರು ಆರೋಪಿಸಿದರು.
ಮಂಗಳೂರಿನ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಇವರು ಸರಕಾರದ ದುಡ್ಡಿನಲ್ಲಿ ದೆಹಲಿಯಲ್ಲಿ ಸತ್ಯಾಗ್ರಹ ಮಾಡಿದ್ದರು. ಕರ್ನಾಟಕಕ್ಕೆ ಬರಬೇಕಾದ ತೆರಿಗೆ ಪಾಲಿನ ಕುರಿತು ಕಾಂಗ್ರೆಸ್ ಪಕ್ಷದ ರಾಜ್ಯಸಭಾ ವಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ ಅವರು ಪ್ರಶ್ನೆ ಮಾಡಿದ್ದರು. ಅಂಕಿಅಂಶಗಳ ಸಹಿತ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಉತ್ತರ ಕೊಟ್ಟಿದ್ದರ ಕುರಿತು ಗಮನ ಸೆಳೆದರು.
2004ರಿಂದ 2014ರ ನಡುವಿನ ಯುಪಿಎ ಅವಧಿಯಲ್ಲಿ 83 ಸಾವಿರ ಕೋಟಿ ಹಾಗೂ 2014ರಿಂದ ಕಳೆದ 10 ವರ್ಷಗಳಲ್ಲಿ 2 ಲಕ್ಷದ 83 ಸಾವಿರ ಕೋಟಿ ಕೊಟ್ಟಿರುವುದರ ಕುರಿತು ತಿಳಿಸಿದ್ದಾರೆ. ತೆರಿಗೆ ಹಂಚಿಕೆ ಕುರಿತು ಕೂಡ ಮಲ್ಲಿಕಾರ್ಯನ ಖರ್ಗೆ ಮತ್ತು ಚೌಧರಿಯವರಿಗೆ ಉತ್ತರ ನೀಡಿದ್ದಾರೆ ಎಂದು ವಿವರಿಸಿದರು.
ನೀತಿ ಆಯೋಗದ ಸಭೆಗೆ ಹಾಜರಾಗದ ಸಿದ್ದರಾಮಯ್ಯನವರು ಹಾದಿಬೀದಿಯಲ್ಲಿ ಕೇಂದ್ರ ಸರಕಾರವನ್ನು ವಿನಾಕಾರಣ ಟೀಕೆ ಮಾಡುತ್ತಿದ್ದಾರೆ ಎಂದು ದೂರಿದರು. ಇದೊಂದು ನಿರಂತರ ಚಾಳಿ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ದೇಶದಲ್ಲಿ ಆಡಳಿತಾತ್ಮಕ ಬದಲಾವಣೆ ತರುವುದಾಗಿ ಪ್ರಣಾಳಿಕೆಯಲ್ಲಿ ಹೇಳುವ ಕಾಂಗ್ರೆಸ್ ಪಕ್ಷವು ತನಗೆ ಐದು ದಶಕಕ್ಕೂ ಹೆಚ್ಚು ಕಾಲ ದೇಶದ ಆಡಳಿತ ನಡೆಸಲು ಅವಕಾಶ ಸಿಕ್ಕಿದಾಗ ಏನು ಮಾಡಿದೆ ಎಂದು ಅವರು ಪ್ರಶ್ನಿಸಿದರು. ಇದು ಇಂಡಿ ಒಕ್ಕೂಟದ ಪ್ರಣಾಳಿಕೆಯೇ ಅಥವಾ ಕಾಂಗ್ರೆಸ್ ಪ್ರಣಾಳಿಕೆಯೇ ಎಂದು ಅವರು ಕೇಳಿದರು.
ಕಾಂಗ್ರೆಸ್ಸಿನ ಪ್ರಣಾಳಿಕೆ ಇದಾದರೆ ನೀವು ಅಧಿಕಾರಕ್ಕೆ ಅಗತ್ಯವಾದ ಸೀಟುಗಳಲ್ಲಿ ಸ್ಪರ್ಧೆ ಮಾಡಿಯೇ ಇಲ್ಲ ಎಂದು ಗಮನ ಸೆಳೆದರು. ಟಿಎಂಸಿ, ಎಸ್ಪಿ, ಬಿಎಸ್ಪಿ ಮತ್ತಿತರ ಪಕ್ಷಗಳಿಗೆ ಸೀಟು ಕೊಟ್ಟ ಬಳಿಕ ಕಾಂಗ್ರೆಸ್ ಪಕ್ಷದ ಸ್ಪರ್ಧೆ 150- 200 ಸೀಟನ್ನು ದಾಟುವುದಿಲ್ಲ ಎಂದು ವಿವರಿಸಿದರು. ಕಾಂಗ್ರೆಸ್ಸಿಗೆ ಅಧಿಕಾರಕ್ಕೆ ಬರಲು ಅವಕಾಶವೇ ಇಲ್ಲ. ಆದ್ದರಿಂದ ಅವರದು ಸುಳ್ಳು ಸುಳ್ಳು ಆಶ್ವಾಸನೆ ಎಂದು ಟೀಕಿಸಿದರು.
ಮೋದಿಯವರು 80 ಕೋಟಿ ಜನರಿಗೆ 75 ಲಕ್ಷ ಮೆಟ್ರಿಕ್ ಟನ್ ಆಹಾರ ವಿತರಣೆ ಮಾಡುತ್ತಿದ್ದಾರೆ. ಕಾಂಗ್ರೆಸ್ ತಿಳಿಸಿದಂತೆ 28ರಿಂದ 30 ಕೋಟಿ ಮಹಿಳೆಯರಿಗೆ ಒಂದು ಲಕ್ಷದಂತೆ ಕೊಡಲು 25-30 ಲಕ್ಷ ಕೋಟಿ ಹಣ ಬೇಕು. ಇಷ್ಟೊಂದು ಹಣವನ್ನು ಎಲ್ಲಿಂದ ತರುತ್ತೀರಿ ಎಂದು ಅವರು ಪ್ರಶ್ನೆ ಮಾಡಿದರು. ನಿಮ್ಮ ಹಣದ ಮೂಲ ಯಾವುದು ಎಂದು ವಿವರಣೆ ಕೊಡಿ ಎಂದು ಆಗ್ರಹಿಸಿದರು.
ದೇಶ ವಿಭಜನೆಯಾದ ಸಂದರ್ಭದಲ್ಲಿ 1936ರಲ್ಲಿ ಮುಸ್ಲಿಂ ಲೀಗ್ ತನ್ನ ಪ್ರಣಾಳಿಕೆಯಲ್ಲಿ ಹೇಳಿದ್ದ ವಿಷಯಗಳನ್ನು ಕಾಂಗ್ರೆಸ್ ಹೊಸ ಪ್ರಣಾಳಿಕೆಯಲ್ಲಿ ತಿಳಿಸಿದೆ. ಕಾಂಗ್ರೆಸ್ ಪಕ್ಷವು ಹೊಸ ಮುಸ್ಲಿಂ ಲೀಗಿನಂತೆ ಕಾಣುತ್ತಿದೆ ಎಂದು ದೂರಿದರು. ದೇಶ ವಿಭಜನೆ ಮತ್ತು ತುಷ್ಟೀಕರಣಕ್ಕೆ ಕಾಂಗ್ರೆಸ್ ಒತ್ತು ಕೊಡುತ್ತಿದೆ ಎಂದು ಆಕ್ಷೇಪ ಸೂಚಿಸಿದರು.
ಭ್ರಷ್ಟಾಚಾರ ಮಿತಿಮೀರಿದ್ದರ ಕುರಿತು ಅವರು ಗಮನ ಸೆಳೆದರು. ಕಾಂಗ್ರೆಸ್ ಪಕ್ಷದ ಶಾಸಕರು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಈ ಕುರಿತು ಆಕ್ಷೇಪಿಸಿದ್ದಾರೆ ಎಂದು ವಿವರಿಸಿದರು. ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಅವರು ಗಮನ ಸೆಳೆದರು. ಅಭಿವೃದ್ಧಿ ವಿಷಯದಲ್ಲಿ ಮೋದಿಯವರ ಸರಕಾರ ದಾಪುಗಾಲಿಟ್ಟಿದೆ ಎಂದು ಅವರು ವಿವರಿಸಿದರು. ಕೇಂದ್ರ ಸರಕಾರದ ಸಾಧನೆಗಳ ಆಧಾರದಲ್ಲಿ ಬಿಜೆಪಿ ಸ್ಪರ್ಧಿಸಿ 370ಕ್ಕೂ ಹೆಚ್ಚು ಸೀಟು, ಎನ್‍ಡಿಎ ಸೀಟು ಸೇರಿ 400ಕ್ಕೂ ಹೆಚ್ಚು ಸೀಟುಗಳನ್ನು ಪಡೆಯುವ ವಿಶ್ವಾಸ ನಮಗಿದೆ ಎಂದು ತಿಳಿಸಿದರು.
ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪಕ್ಷದ ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ರವಿಶಂಕರ್ ಮಿಜಾರ್, ಮೋಹನ್ ರಾಜ್ ಆರ್ ಕೆ, ಸಂಜಯ ಪ್ರಭು, ಇತರ ಪ್ರಮುಖರು ಉಪಸ್ಥಿತರಿದ್ದರು.
BREAKING: ನಿವೃತ್ತ `IAS’ ಅಧಿಕಾರಿ ಕೆ.ಶಿವರಾಮ್ ಪತ್ನಿ `ವಾಣಿ’ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆ
BREAKING : ಅಧಿಕೃತವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಿರ್ದೇಶಕಿ ‘ಐಶ್ವರ್ಯಾ ರಜನಿಕಾಂತ್, ಧನುಷ್’