ಕಲಬುರಗಿ : ಕರ್ನಾಟಕದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಚುನಾವಣಾ ಪೂರ್ವ ನೀಡಿದ ಭರವಸೆಯಂತೆ ನಾಡಿನ ಜನರ ಕಲ್ಯಾಣಕ್ಕೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನುಡಿದಂತೆ ನಡೆದಿದೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕಲಬುರಗಿ ನಗರದ ಎನ್.ವಿ.ಮೈದಾನದಲ್ಲಿ ಬುಧವಾರ ನಡೆದ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಮತ್ತು 1,460 ಕೋಟಿ ರೂ. ಬೃಹತ್ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಲಬುರಗಿ ಜಿಲ್ಲೆಯಲ್ಲಿ 5.25 ಲಕ್ಷ ಜನ ಗೃಹ ಲಕ್ಷ್ಮೀ ಯೋಜನೆಯಡಿ ಪ್ರತಿ ಮಾಹೆ 2,000 ರೂ. ಪಡೆಯುತ್ತಿದ್ದಾರೆ. 5.28 ಲಕ್ಷ ಮನೆಗಳಲ್ಲಿ ಗೃಹ ಜ್ಯೋತಿಯ ಬೆಳಕು ಕಾಣುತ್ತಿದೆ. 4.91 ಲಕ್ಷ ಪಡಿತರ ಕುಟುಂಬಗಳು ಅನ್ನ ಭಾಗ್ಯ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಪ್ರತಿ ದಿನ 1.57 ಲಕ್ಷ ಜನ ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ರಾಜ್ಯದಾದ್ಯಂತ 1.40 ಲಕ್ಷ ಜನ ಯುವ ನಿಧಿಯಡಿ ನಿರುದ್ಯೋಗ ಭತ್ಯೆ ಪಡೆಯುತ್ತಿದ್ದಾರೆ. ಇದೆಲ್ಲವು ಬಡವರ ಕಲ್ಯಾಣಕ್ಕೆ ರೂಪಿಸಿರುವ ನಮ್ಮ ಸರ್ಕಾರದ ಜನಪರ ಯೋಜನೆಗಳಾಗಿವೆ ಎಂದರು.
2013ರಲ್ಲಿ ಅಂದಿನ ಯು.ಪಿ.ಎ. ಸರ್ಕಾರ ಈ ಭಾಗಕ್ಕೆ ಸಂವಿದಾನಕ್ಕೆ ತಿದ್ದುಪಡಿ ತಂದು 371ಜೆ ಕಲಂ ಜಾರಿಗೆ ತಂದ ಪರಿಣಾಮ ಇಂದಿಲ್ಲ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗಿವೆ. 9 ತಿಂಗಳ ಹಿಂದೆ ಅಧಿಕಾರಕ್ಕೆ ಬಂದ ಇಲ್ಲಿನ ರಾಜ್ಯ ಸರ್ಕಾರ 371ಜೆ ಮೀಸಲಾತಿಯಡಿ ಈಗಾಗಲೆ 15 ಸಾವಿರ ಹುದ್ದೆಗಳ ಭರ್ತಿಗೆ ಚಾಲನೆ ನೀಡಿದೆ. ಹೀಗಾಗಿ ಪ್ರದೇಶದ ಸರ್ವರ ಕಲ್ಯಾಣಕ್ಕೆ ನಮ್ಮ ಸರ್ಕಾರ ಶ್ರಮಿಸುತ್ತಿದೆ ಎಂದರು.
ತಾವು ರೈಲ್ವೆ ಸಚಿವರಾಗಿದ್ದಾಗ 11 ತಿಂಗಳ ಅಲ್ಪ ಅವಧಿಯಲ್ಲಿಯೆ 27 ರೈಲು ಓಡಿಸಿದೆ. ಕಲಬುರಗಿ-ಹುಬ್ಬಳ್ಳಿ, ಹುಬ್ಬಳ್ಳಿ-ಹೈದ್ರಾಬಾದ, ಹುಬ್ಬಳ್ಳಿ-ಮುಂಬೈ, ಕಲಬುರಗಿ-ಬೀದರ ಹೀಗೆ ಅನೇಕ ರೈಲುಗಳನ್ನು ಆರಂಭಿಸಲಾಯಿತು. ಕಾರ್ಮಿಕ ಸಚಿವನಾಗಿದ್ದಾಗ ಇ.ಎಸ್.ಐ.ಸಿ. ಆಸ್ಪತ್ರೆ ಆರಂಭಿಸಿದೆ. ಸಿ.ಯು.ಕೆ. ಸ್ಥಾಪಿಸಿದ್ದಾಯಿತು. ನನ್ನನ್ನು ಟೀಕಿಸಿದ ವಿರೋಧ ಪಕ್ಷದವರ ಕ್ಷೇತ್ರದಲ್ಲಿಯೂ ಕೆಲಸ ಮಾಡಿರುವೆ. ಅಭಿವೃದ್ಧಿಯಲ್ಲಿ ಎಂದೂ ರಾಜಕಾರಣ ಮಾಡಿಲ್ಲ. ಜನರ ಕಲ್ಯಾಣವೇ ನಮಗೆ ಮುಖ್ಯ ಎಂದ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಅಧಿಕಾರದಲ್ಲಿರುವ ಕೇಂದ್ರ ಸರ್ಕಾರ ರಾಜ್ಯಕ್ಕೆ, ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಯಾವುದೇ ಕೊಡುಗೆ ನೀಡದೆ ಸುಳ್ಳು ಭರವಸೆ ನೀಡುತ್ತಿದೆ. 10 ವರ್ಷವಾದರೂ ವಾಡಿ-ಗದಗ ಲೈನ್ ಮರೀಚಿಕೆಯಾಗಿದೆ. ವರ್ಷದಲ್ಲಿ 2 ಕೋಟಿ ಉದ್ಯೋಗ ಅಂದ್ರು ಯಾರಿಗೂ ಉದ್ಯೋಗ ಸಿಕ್ಕಿಲ್ಲ, ರೈತರ ಆದಾಯ ಡಬಲ್ ಆಗಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ತ್ಯಾಗ, ಬಲಿದಾನ ಫಲ ಸಂವಿಧಾನ
ಸ್ವಾತಂತ್ರ್ಯ ನಂತರ ದೇಶಕ್ಕೆ ಉತ್ತಮ ಸಂವಿಧಾನ ಅಗತ್ಯವಿತ್ತು. ತ್ಯಾಗ-ಬಲಿದಾನದ ಫಲವಾಗಿ ನಮಗೆ ಸಂವಿಧಾನ ಲಭಿಸಿದೆ. ಅಷ್ಟೊಂದು ಸಲೀಸಾಗಿ ಅದು ದಕ್ಕಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಅವರಿಂದ ರಚಿತ ಸಂವಿಧಾನ ಇಂದು ರಾಜ್ಯದ ಸಂಸದರೊಬ್ಬರು ತಮ್ಮ ಪಕ್ಷದ ಸರ್ಕಾರ ಬಹುಮತ ಬಂದಲ್ಲಿ ಸಂವಿಧಾನ ಬದಲಾಯಿಸುವುದು ಎಂದು ಹೇಳುತ್ತಿದ್ದಾರೆ. ರಾಷ್ಟ್ರೀಯತೆ, ಸಮಗ್ರತೆ, ಏಕತೆಯು ಸಂವಿಧಾನದಲ್ಲಿ ಪ್ರಸ್ತಾಪಿಸಲಾಗಿದೆ. ದೇಶದ ಪ್ರಜಾಪ್ರಭುತ್ವ ಉಳಿವಿಗೆ ದೇಶದ ಪ್ರತಿ ಪ್ರಜೆ ಸಂವಿಧಾನದ ರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.