ದೆಹಲಿ : “ಕುಮಾರಸ್ವಾಮಿ ಒತ್ತುವರಿ ಮಾಡಿಕೊಂಡಿಲ್ಲ ಎಂದರೆ ಮಾಡಿಕೊಂಡಿಲ್ಲ, ಜಮೀನು ಕದ್ದಿಲ್ಲ ಎಂದರೆ ಕದ್ದಿಲ್ಲ. ಎಲ್ಲಕ್ಕೂ ಅಳತೆ, ದಾಖಲೆ ಇರುತ್ತದೆ ಅಲ್ಲವೇ? ಇದಕ್ಕೂ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಗೂ ಏನು ಸಂಬಂಧ? ಕುಮಾರಸ್ವಾಮಿ ಅವರು ಏಕೆ ಗಾಬರಿಯಾಗಬೇಕು?” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಛೇಡಿಸಿದ್ದಾರೆ.
ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಸರಣಿ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಉತ್ತರಿಸಿದರು.
“ಕಾಂಗ್ರೆಸ್ ಗೆ ನಾನೇ ಟಾರ್ಗೆಟ್, ದ್ವೇಷದ ರಾಜಕಾರಣ ಮಾಡಲಾಗುತ್ತಿದೆ” ಎನ್ನುವ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ, “ನಾನು ಹಾಗೂ ಸಿದ್ದರಾಮಯ್ಯ ಎಂದಿಗೂ ದ್ವೇಷದ ರಾಜಕಾರಣ ಮಾಡಿಲ್ಲ. ಅದರ ಅವಶ್ಯಕತೆಯೂ ಇಲ್ಲ. ನ್ಯಾಯಾಲಯ ಹೇಳಿದಂತೆ ಕಾನೂನು ಪ್ರಕಾರ ಕೆಲಸ ಮಾಡಲಾಗಿದೆ. ಕೇತಗಾನಹಳ್ಳಿ ಸುದ್ದಿಗೆ ನಾವು ಹೋಗಿಲ್ಲ. ನಮಗೆ ಈ ವಿಚಾರ ಗೊತ್ತೂ ಇಲ್ಲ. ಯಾರೋ ಇದರ ಬಗ್ಗೆ ಪಿಐಎಲ್ ಹಾಕಿದ್ದಾರೆ. ಇದು ಬಹಳ ವರ್ಷದಿಂದ ನಡೆದಿದೆ. ಭೂಒತ್ತುವರಿ ಬಗ್ಗೆ ಸರಿಯಾಗಿ ಕ್ರಮ ತೆಗೆದುಕೊಂಡಿಲ್ಲ ಎಂದು ನ್ಯಾಯಲಯವು ಅಧಿಕಾರಿಗಳಿಗೆ ಛೀಮಾರಿ ಹಾಕಿದೆ. ಇದರ ಬಗ್ಗೆ ನಾವು ಮಾಧ್ಯಮದಲ್ಲಿ ಓದಿದ್ದೇವೆ. ನ್ಯಾಯಾಲಯ ಕ್ರಮ ತೆಗೆದುಕೊಳ್ಳಲು ಗಡವು ನೀಡಿದ ಕಾರಣಕ್ಕೆ ಅಧಿಕಾರಿಗಳು ಹೋಗಿ ಅಳತೆ ಮಾಡಿದ್ದಾರೆ” ಎಂದರು.
“ವಾಟ್ಸಪ್ ಅಲ್ಲಿ ಬಂದ ಸುದ್ದಿ ನೋಡಿದೆ. ಅಧಿಕಾರಿಗಳು ನೋಟಿಸ್ ನೀಡದೆ ಅಳತೆ ಮಾಡಲು ಸಾಧ್ಯವೇ? ಮೊದಲಿನಿಂದಲೂ ಅಳತೆ ಮಾಡಲಾಗಿತ್ತು. ಅವರ ಸಿಬ್ಬಂದಿ ಹೆಚ್ಚುವರಿ ಭೂಮಿಯಿದ್ದರೆ ವಾಪಸ್ ತೆಗೆದುಕೊಳ್ಳಿ ಎಂದು ಏಕೆ ಪತ್ರ ಬರೆದಿದ್ದಾರೆ? ಎಷ್ಟು ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುದು ತಿಳಿದಿಲ್ಲ. ಅವರು ನಮ್ಮ ಮೇಲೆ ಈ ಹಿಂದೆ ಏನು ಮಾತನಾಡಿದ್ದಾರೆ ಎಂಬುದನ್ನು ಈಗ ಒಮ್ಮೆ ನೆನಪು ಮಾಡಿಕೊಳ್ಳಲಿ” ಎಂದು ತಿರುಗೇಟು ನೀಡಿದರು.
ನಮ್ಮದನ್ನೂ ಹೊರಗೆ ತೆಗೆದಿಡಲಿ
“ನಮ್ಮದೂ ಬೇಕಾದಷ್ಟು ದಾಖಲೆ ತೆಗೆದಿಟ್ಟುಕೊಂಡಿದ್ದಾರಂತೆ. ನಾವು ಏನಾದರೂ ಒತ್ತುವರಿ ಮಾಡಿಕೊಂಡಿದ್ದರೆ ತೆಗೆದಿಡಲಿ. ಎಲ್ಲವೂ ನನ್ನ ಬಳಿ ಇದೆ, ಅದನ್ನು ಬಿಡುಗಡೆ ಮಾಡುತ್ತೇನೆ ಎಂದು ಅವರು ಹೇಳಿದ್ದ ನೆನಪು. ಮಧ್ಯರಾತ್ರಿ ಒತ್ತಿಸಿಕೊಂಡಿದ್ದಾರೆ, ಬರೆಸಿಕೊಂಡಿದ್ದಾರೆ ಎಂದು ನಮ್ಮ ವಿರುದ್ಧ ಆರೋಪ ಮಾಡಿದ್ದರು. ಕಾಸು ಕೊಟ್ಟು ಬರೆಸಿಕೊಂಡಿದ್ದೇವೆ. ಪುಗಸಟ್ಟೆ ಯಾರೂ ಬರೆದು ಕೊಡುವುದಿಲ್ಲ. ನಾನು ಒತ್ತುವರಿಗೆ ಯಾರಿಗಾದರೂ ಭಯಪಡಿಸಿದ್ದರೆ ಅವರಿಂದ ದೂರು ದಾಖಲಿಸಲಿ ಅಥವಾ ಇವರೇ ದೂರು ನೀಡಲಿ. ಇವರು ಮಾತ್ರ ಶುದ್ಧ, ನಾವು ಅಶುದ್ಧವೇ? ನಾವು ಯಾವುದೇ ದ್ವೇಷದ ರಾಜಕಾರಣಕ್ಕೆ ಹೋಗಿಲ್ಲ. ನನ್ನ ಮೇಲೂ ಬೇಕಾದಷ್ಟು ಪಿಐಎಲ್ ಹಾಕಿದ್ದಾರೆ” ಎಂದು ಹರಿಹಾಯ್ದರು.
“ನನ್ನ ಮೇಲೂ ಈ ಹಿಂದೆ ಅವರು ಬೇಕಾದಷ್ಟು ಆರೋಪ ಮಾಡಿಲ್ಲವೇ? ಗ್ರಾನೈಟ್ ಅದು, ಇದು ಕದ್ದಿದ್ದೀರಿ ಎಂದು ಹೇಳಿರಲಿಲ್ಲವೇ? ನನ್ನ ಹೆಂಡತಿ, ತಂಗಿ, ತಮ್ಮನ ಮೇಲೆ ತನಿಖೆ ನಡೆದಿರಲಿಲ್ಲವೇ? ಬಳ್ಳಾರಿಗೆ ಹೋಗಿ ಕದ್ದುಕೊಂಡು ಬಂದಿದ್ದೀರಿ ಎಂದು ಪ್ರಕರಣ ದಾಖಲಿಸಿರಲಿಲ್ಲವೇ? ಇವರ ಅಣ್ಣ ಆದಾಯ ತೆರಿಗೆ, ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ಬೇಕಾದಂತೆ ಅರ್ಜಿ ಬರೆದುಕೊಟ್ಟಿರಲಿಲ್ಲವೇ? ನಮಗೆಲ್ಲಾ ಇದು ತಿಳಿದಿಲ್ಲವೇ? ಸುಮ್ಮನೆ ಕಾಂಗ್ರೆಸ್, ಕಾಂಗ್ರೆಸ್ ಎನ್ನುತ್ತಾರೆ. ಯಾವ ಕಾಂಗ್ರೆಸ್ಸಿಗರು ಇವರ ವಿಚಾರಕ್ಕೆ ಹೋಗಿಲ್ಲ. ಇವರ ಜಮೀನು ಇದ್ದರೆ ಉಳಿದುಕೊಳ್ಳುತ್ತದೆ. ಇಲ್ಲದಿದ್ದರೇ ಬಿಟ್ಟುಕೊಡಬೇಕಾಗುತ್ತದೆ” ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
“ಗ್ರೇಟರ್ ಬೆಂಗಳೂರಿನಿಂದ ಲೂಟಿ ಮಾಡಲಾಗುತ್ತಿದೆ, ನಾವು ಯಾವುದೇ ಲೂಟಿ ಮಾಡುತ್ತಿಲ್ಲ” ಎನ್ನುವ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ, “ಅವರಿಗೆ ರಾಜಕೀಯವಾಗಿ ಜೀವ ಕೊಟ್ಟ ರಾಮನಗರ ಜಿಲ್ಲೆಗೆ ಹೊಸ ರೂಪ ನೀಡಲು ನಾವು ಈ ನಿರ್ಧಾರ ಮಾಡಿದ್ದೇವೆ. ಆದರೆ ಅವರು ರಾಜಕೀಯ ಆರೋಪ ಮಾಡಬೇಕು ಎಂದು ಮಾಡುತ್ತಿದ್ದಾರೆ. ಅವರು ನನ್ನನ್ನು ಬೈಯದೇ ಇನ್ಯಾರನ್ನು ಬೈಯುತ್ತಾರೆ” ಎಂದರು.
“ಕುಮಾರಸ್ವಾಮಿ ಅವರೇ ಹೆಚ್ಚು ಅನುಕೂಲ ಪಡೆದವರು, ಆದರೂ ನಿಮ್ಮ ಮೇಲೆ ಏಕೆ ಆರೋಪ ಮಾಡುತ್ತಿದ್ದಾರೆ. ಅವರಿಗೆ ನೀವೇ ಅನುಕೂಲ ಮಾಡಿಕೊಟ್ಟಿದ್ದೀರಿ ಅಲ್ಲವೇ” ಎಂದು ಮರು ಪ್ರಶ್ನಿಸಿದಾಗ, ” “ಅವರ ಜಮೀನು ಪಕ್ಕದಲ್ಲಿ ಇದೆ ಎನ್ನುವ ಕಾರಣಕ್ಕೆ ನಾವು ದ್ವೇಷ ರಾಜಕಾರಣ ಮಾಡಲು ಆಗುತ್ತದೆಯೇ? ಅವರ ತಂದೆ 5- 6 ಸಾವಿರಕ್ಕೆ 1984-85 ರಲ್ಲಿ ಅವರ ಅತ್ತೆ, ನಾದಿನಿ ಹೆಸರಿಗೆ ಜಮೀನು ತೆಗೆದುಕೊಂಡಿದ್ದರು. ಅದು ಕುಮಾರಸ್ವಾಮಿ ಅವರಿಗೆ ಉಡುಗೊರೆಯಾಗಿ ಬಂದಿದೆ. 7-8 ಕೋಟಿಗೆ ಹೋಗುತ್ತದೆ. ಬೆಂಗಳೂರು ದಕ್ಷಿಣ ಜಿಲ್ಲೆ ಎಂದಾದರೆ 10 ಕೋಟಿಯಾಗುತ್ತದೆ. ನಾವು 2-3 ಸಾವಿರಕ್ಕೆ ಒಂದು ಕಾಲದಲ್ಲಿ ಜಮೀನು ತೆಗೆದುಕೊಂಡಿದ್ದೆವು, ಅವುಗಳ ಬೆಲೆ ಸಹ ಹೆಚ್ಚಾಗಿದೆ ಏನು ಮಾಡಲು ಆಗುತ್ತದೆ” ಎಂದು ಮಾರ್ಮಿಕವಾಗಿ ನುಡಿದರು.
“ಏನಾದರೂ ಒಳ್ಳೆ ಕೆಲಸಗಳು ಮಾಡುವಾಗ ಅಡಚಣೆಗಳು ಉಂಟಾಗುತ್ತವೆ. ಅದಕ್ಕೆ ಕಲ್ಲೆಸೆಯುವವರು, ಅಡಚಣೆ ಉಂಟು ಮಾಡುವವರು ಇರುತ್ತಾರೆ. ಈ ಜಾಗವನ್ನು ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗಲೇ ರಾಮನಗರ, ಸಾತನೂರು, ಸೋಲೂರು, ತ್ಯಾಮಗೊಂಡ್ಲು ಸೇರಿದಂತೆ ಒಟ್ಟು ಐದು ಕಡೆ ನೋಟಿಫಿಕೇಶನ್ ಮಾಡಿದ್ದರು. ನಾನು ಡಿನೋಟಿಫಿಕೇಷನ್ ಗೆ ಹೋಗಿರಲಿಲ್ಲ. ಹೊಸ ಮಾದರಿಯ ಅಂತರರಾಷ್ಟ್ರೀಯ ಮಟ್ಟದ ನಗರ ಮಾಡಬೇಕು ಎನ್ನುವ ಆಲೋಚನೆಯನ್ನು ಇಟ್ಟುಕೊಂಡು ಈ ಯೋಜನೆಗಳನ್ನು ಕ್ಯಾಬಿನೆಟ್ ಮುಂದೆ ಇಟ್ಟು ಒಪ್ಪಿಗೆ ತೆಗೆದುಕೊಳ್ಳಲಾಗಿದೆ. ಇದು ಅಂತರರಾಷ್ಟ್ರೀಯ ನಗರವಾಗಿ ಬೆಳೆಯುತ್ತದೆ. ಈಗ ಇರುವ ಬೆಂಗಳೂರಿಗಿಂತ ಹೊಸ ಬೆಂಗಳೂರನ್ನು ಸೃಷ್ಟಿ ಮಾಡಲು ಅನುಕೂಲವಾಗುತ್ತದೆ. ಕುಮಾರಸ್ವಾಮಿಗೆ ಹೆಚ್ಚು ಅನುಕೂಲವಾಗಲಿದೆ. ಅವರದ್ದೇ ಹೆಚ್ಚು ಜಮೀನುಗಳು ಅಕ್ಕಪಕ್ಕವಿರುವುದು. ಅತ್ಯಂತ ಹೆಚ್ಚು ಅನುಕೂಲ ಪಡೆಯುವವರು ಅವರ ಕುಟುಂಬದವರೇ” ಎಂದು ತಿಳಿಸಿದರು.
ಒಳಮೀಸಲಾತಿ ಜಾರಿಗೆ ನಮ್ಮ ಪಕ್ಷ ಬದ್ಧವಾಗಿದೆ
ಒಳ ಮೀಸಲಾತಿ ವಿಚಾರವಾಗಿ ನಾಯಕರ ಸಭೆ ಬಗ್ಗೆ ಪ್ರಶ್ನಿಸಿದಾಗ “ಒಳಮೀಸಲಾತಿ ವಿಚಾರವಾಗಿ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಕೊಟ್ಟ ಮಾತಿಗೆ ನಾವು ಬದ್ಧವಾಗಿದ್ದೇವೆ. ಒಳ ಮೀಸಲಾತಿ ವಿಚಾರವಾಗಿ ಪರಿಶಿಷ್ಟ ಜಾತಿ ಸಮುದಾಯದವರು ತಮ್ಮ, ತಮ್ಮಲ್ಲಿಯೇ ಮಾತನಾಡಿ ರಾಜಿ ಮಾಡಿಕೊಳ್ಳಿ ಎಂದು ಹೇಳಲಾಗಿತ್ತು. ಆದ ಕಾರಣ ಸಭೆ ಮಾಡಿದ್ದಾರೆ. ಬೋವಿಗಳು, ಲಂಬಾಣಿ, ಕೊರಮ, ಕೊರಚ, ಎಡಗೈ, ಬಲಗೈಗೆ ಸೇರಿದ ಸಮುದಾಯಗಳಿವೆ ಅವರೆಲ್ಲಾ ಸೇರಿ ಒಂದು ತೀರ್ಮಾನಕ್ಕೆ ಬಂದರೆ ಸಂತೋಷ” ಎಂದರು.
ಸರ್ವ ಜನಾಂಗದ ಶಾಂತಿಯ ತೋಟ ನಮ್ಮದು
ಅಲ್ಪಸಂಖ್ಯಾತರ ಗುತ್ತಿಗೆ ಮೀಸಲು ವಿಚಾರವಾಗಿ ಬಿಜೆಪಿ ಹೋರಾಟದ ಬಗ್ಗೆ ಕೇಳಿದಾಗ, “ಕುವೆಂಪು ಅವರ ಹಾಡನ್ನು ನಾವು ನಾಡಗೀತೆ ಮಾಡಿಕೊಂಡಿದ್ದೇವೆ. ನಮ್ಮದು ಸರ್ವಜನಾಂಗದ ಶಾಂತಿಯ ತೋಟ. ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರು ಎಲ್ಲರೂ ಮೇಲಕ್ಕೆ ಬರಬೇಕು. ಪರಿಶಿಷ್ಟ ಜಾತಿಯವರಿಗು ಕೂಡ ಗುತ್ತಿಗೆ ಮೀಸಲಾತಿ ನೀಡಿದ್ದೇವೆ. ಇದೇ ರೀತಿ ಇವರಿಗೂ ಕೊಟ್ಟಿದ್ದೇವೆ. ಸಣ್ಣಪುಟ್ಟ ಕೆಲಸ ಮಾಡಿಕೊಳ್ಳುತ್ತಾರೆ” ಎಂದರು.
ಬಡತನವೇ ಒಂದು ಧರ್ಮ
ಸಿದ್ದರಾಮಯ್ಯ, ಶಿವಕುಮಾರ್ ಒಂದು ಧರ್ಮದ ಓಲೈಕೆ ಮಾಡುತ್ತಿದ್ದಾರೆ ಹಿಂದುಳಿದವರು ಕಾಂಗ್ರೆಸ್ ಗಮನದಲ್ಲಿ ಇಲ್ಲ ಎನ್ನುವ ಆರೋಪದ ಬಗ್ಗೆ ಕೇಳಿದಾಗ, “ಹೇಳಿದವರು ಯಾರು? ಪರಿಶಿಷ್ಟ ಜಾತಿಯವರು ಒಂದು ಧರ್ಮವೇ? ಬಡತನವೇ ಒಂದು ಧರ್ಮ. 2ಎ ವರ್ಗಕ್ಕೆ, ಪರಿಶಿಷ್ಟರಿಗೆ ಗುತ್ತಿಗೆ ಮೀಸಲಾತಿ ನೀಡಿಲ್ಲವೇ? ಹಾಗಾದರೆ ಇವರು ಎಲ್ಲರಿಗೂ ವಿರೋಧ ಮಾಡುತ್ತಿದ್ದಾರೆ. ಹಾಗಾದರೆ ಈ ವರ್ಗಗಳ ಜನರನ್ನು ಮೇಲಕ್ಕೆ ಎತ್ತುವುದು ಹೇಗೆ? ಹಾಗಾದರೆ ಪರಿಶಿಷ್ಟ, ಅಲ್ಪಸಂಖ್ಯಾತ, ಹಿಂದುಳಿದ ಇಲಾಖೆಗಳನ್ನು ಏಕೆ ಇಟ್ಟುಕೊಂಡಿದ್ದೇವೆ?. ಅವರಿಗೆ ಹಿಂದು ಮಾತ್ರ ಮುಂದು. ನಮಗೆ ಆ ರೀತಿಯ ಮನೋಭಾವವಿಲ್ಲ. ಹಿಂದೂ, ಕ್ರೈಸ್ತ, ಮುಸಲ್ಮಾನ, ಒಕ್ಕಲಿಗ, ಲಿಂಗಾಯತ, ಮಹಿಳೆಯರು ಎಲ್ಲರೂ ಮುಂದು, ನಾವೆಲ್ಲ ಒಂದು ಎಂಬುದು ನಮ್ಮ ಭಾವನೆ” ಎಂದರು.
ಪೆನ್ನಾರ್ ನದಿ ನೀರು ವಿವಾದ ಸಭೆ ಮುಂದೂಡಿಕೆ
“ಸೋಮವಾರ (ಮಾ.17) ಮಧ್ಯರಾತ್ರಿ ಹೊತ್ತಿಗೆ ತಮಿಳುನಾಡಿನವರು ಪೆನ್ನಾರ್ ಸಭೆಯನ್ನು ಬಹಿಷ್ಕರಿಸಿ ಪ್ರತ್ಯೇಕ ದಿನಾಂಕ ನೀಡಿ ಎಂದು ಕೇಳಿದ ಕಾರಣಕ್ಕೆ ಸಭೆಯನ್ನು ಮುಂಡೂಡಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಯಾರ ಬಳಿ ಮಾತನಾಡಬೇಕೊ ಅವರ ಬಳಿ ದೂರವಾಣಿಯಲ್ಲಿ ನಾನು ಮಾತನಾಡಿದ್ದೇನೆ. ಮುಂದಿನ ಸಭೆ ದಿನಾಂಕ ತಿಳಿಸಲಾಗುವುದು ಎಂದು ಹೇಳಿದ್ದಾರೆ. ಇವತ್ತಿನ ಸಭೆಯಲ್ಲಿ ಭಾಗವಹಿಸಲು ತಮಿಳುನಾಡಿನವರು ಒಪ್ಪಿಲ್ಲ ಎಂದು ತಿಳಿಸಿದ್ದಾರೆ” ಎಂದರು.
“ಪೆನ್ನಾರ್ ನದಿ ನೀರಿನ ವಿಚಾರವಾಗಿ ಕರ್ನಾಟಕದ ಯೋಜನೆಗಳಿಗೆ ತಮಿಳುನಾಡಿನವರು ತಕರಾರು ಎತ್ತಿದ್ದರು. ಈ ಕಾರಣಕ್ಕಾಗಿ ಕೇಂದ್ರ ಜಲಶಕ್ತಿ ಸಚಿವರ ಸಮ್ಮುಖದಲ್ಲಿ ಎರಡು ರಾಜ್ಯಗಳ ನಡುವೆ ರಾಜಿ ಸಂಧಾನ ಸಭೆಗೆ ನಾನು ಹಾಜರಾಗಿದ್ದೆ. ಮಾರ್ಕಂಡೇಯ ಅಣೆಕಟ್ಟು, ಬೈಲಹಳ್ಳಿ ಬಳಿ ಪಂಪ್ ಹೌಸ್, ವರ್ತೂರು ಕೆರೆಯಿಂದ ನರಸಾಪುರ ಕೆರೆಗೆ ಹಾಗೂ ಮಾಲೂರಿನ ಕಾಟನೂರು ಕೆರೆಗೆ ಪೆನ್ನಾರ್ ನದಿ ನೀರು ಹರಿಸುವ ಕುರಿತು ಕರ್ನಾಟಕ ಯೋಜನೆ ರೂಪಿಸಿತ್ತು” ಎಂದು ಹೇಳಿದರು.
“ತಮಿಳುನಾಡಿನವರು ನ್ಯಾಯಲಯಕ್ಕೆ ತಕರಾರು ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ನಲ್ಲಿ ಈ ವಿಚಾರವನ್ನು ಬಗೆಹರಿಸಲು ಎರಡು- ಮೂರು ಬಾರಿ ದಿನಾಂಕ ಕೊಟ್ಟಿದ್ದರು, ಆದರೆ ಬೆಳಗಾವಿ ಅಧಿವೇಶನವಿದ್ದ ಕಾರಣ ನಾವು ಭಾಗವಹಿಸಲು ಕಷ್ಟವಾಗುತ್ತದೆ ಎಂದು ತಿಳಿಸಿದ್ದೆವು. ಈ ಕಾರಣಕ್ಕೆ ಮಾ.18 ರಂದು ಸಭೆ ಏರ್ಪಡಿಸಿದ್ದರು. ನಾವು ಯಾವ ನಿಲುವನ್ನು ವ್ಯಕ್ತಪಡಿಸಬೇಕು ಎಂದು ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡಿದ್ದೇವೆ” ಎಂದರು.
ಬಿಜೆಪಿಯವರೇ ಗ್ಯಾರಂಟಿ ನೀಡಲು ತುದಿಗಾಲಲ್ಲಿ ನಿಂತಿದ್ದಾರೆ
ತೆಲಂಗಾಣ ಸಿಎಂ ರೇವಂತ ರೆಡ್ಡಿ ಅವರು ಗ್ಯಾರಂಟಿಗೆ ಹಣ ಹೊಂದಿಸಲು ಕಷ್ಟವಾಗುತ್ತಿದೆ ಎನ್ನುವ ಹೇಳಿಕೆ ಬಗ್ಗೆ ಕೇಳಿದಾಗ, “ಅವರ ದುಗುಡವನ್ನು ಅವರು ಹೇಳಿದ್ದಾರೆ. ನಾವು ಶಕ್ತಿಶಾಲಿಯಾಗಿ ಇದ್ದೇವೆ ಎಂದು ಬಜೆಟ್ ಅಲ್ಲಿ 52 ಸಾವಿರ ಕೋಟಿ ಹಣ ಮೀಸಲಿಟ್ಟಿದ್ದೇವೆ. ಇದುವರೆಗೂ ಒಂದೆರಡು ದಿನ ತಡವಾಗಿಯಾದರೂ ನೀಡುತ್ತಾ ಬಂದಿದ್ದೇವೆ. ನಿರ್ದಿಷ್ಟ ಇದೆ ದಿನದಂದು ನೀಡುತ್ತೇವೆ ಎಂದು ಹೇಳಿಲ್ಲ. ಆದರೆ ತಪ್ಪದೇ ನೀಡುತ್ತಿದ್ದೇವೆ. ದೆಹಲಿಯವರು, ಪ್ರಧಾನಮಂತ್ರಿಗಳು ನಮ್ಮನ್ನು ಟೀಕೆ ಮಾಡುತ್ತಿದ್ದರು. ಆದರೆ ಈಗ ಅವರೇ ನಮಗಿಂತ ಮುಂಚಿತವಾಗಿ ನೀಡಲು ತುದಿಗಾಲಲ್ಲಿ ನಿಂತಿದ್ದಾರೆ” ಎಂದರು.
ಮುಸಲ್ಮಾನರಿಗೆ ಮೀಸಲಾತಿ ವಿರೋಧಿಸಿ ಬಿಜೆಪಿಯಿಂದ ತೀವ್ರ ಹೋರಾಟ: ಬಿವೈ ವಿಜಯೇಂದ್ರ
ಮಾ.22ರಂದು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ‘ಅಖಂಡ ಕರ್ನಾಟಕ ಬಂದ್’: ವಾಟಾಳ್ ನಾಗರಾಜ್ | Karnataka Bundh