ಬೆಂಗಳೂರು: ಕೇಂದ್ರಕ್ಕೆ ಹಣದ ಹಾಲು ಕರೆಯುವ ಎರಡನೇ ಅತಿದೊಡ್ಡ ರಾಜ್ಯ ಕರ್ನಾಟಕ. ಆದರೆ, ಇದೀಗ ನಮ್ಮ ಪಾಲಿನ ನ್ಯಾಯಯುತ ಹಣಕ್ಕೂ ಕೇಂದ್ರ ಸರ್ಕಾರದ ಎದುರು ಕೈಕಟ್ಟಿ ನಿಲ್ಲುವಂತಹ ಸ್ಥಿತಿ ಎದುರಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ಹೊರಹಾಕಿದ್ದಾರೆ.
ತಾಜ್ ವೆಸ್ಟ್‌ಎಂಡ್ ಹೋಟೆಲ್‌ನಲ್ಲಿ ಶನಿವಾರ ಎಂಎಸ್ ರಾಮಯ್ಯ ವಿಶ್ವವಿದ್ಯಾಲಯ ಆಯೋಜಿಸಿದ್ದ “ಹಣಕಾಸಿನ ಫೆಡರಲಿಸಂ: ಹದಿನಾರನೇ ಹಣಕಾಸು ಆಯೋಗದ ಮುಂದಿರುವ ಸವಾಲುಗಳು” ಎಂಬ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
“ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಯಾದ 14ನೇ ಹಣಕಾಸು ಆಯೋಗದ ಮುಖ್ಯಸ್ಥರಾಗಿದ್ದ ವೈ.ಬಿ. ರೆಡ್ಡಿ ಕರ್ನಾಟದ ಆದಾಯದಲ್ಲಿ ಶೇ.42 ರಷ್ಟು ಹಿಂತಿರುಗಿಸಲು ಸೂಚಿತ್ತು. ಈ ವೇಳೆ ಕರ್ನಾಟಕಕ್ಕೆ ಶೇ.33 ರಿಂದ ಶೇ.34 ರಷ್ಟು ಹಣ ಲಭ್ಯವಾಗಿತ್ತು. ಆದರೆ, ಕಳೆದ 10 ವರ್ಷದ ಅವಧಿಯಲ್ಲಿ ಈ ಪ್ರಮಾಣ ಶೇ.28ಕ್ಕೆ ಇಳಿದಿದೆ ಪರಿಣಾಮ ರಾಜ್ಯ ಸಂಕಷ್ಟಕ್ಕೆ ಗುರಿಯಾಗಿದೆ” ಎಂದರು.
ಮುಂದುವರೆದು, “ಕರ್ನಾಟಕಕ್ಕೆ ನಷ್ಟದ ಪಾಲನ್ನು ತುಂಬಿಕೊಡಿ ಎಂದು ಸ್ವತಃ ಹಣಕಾಸು ಆಯೋಗವೇ ಹೇಳಿದರೂ ಕೇಂದ್ರ ಸರ್ಕಾರ ಅದನ್ನು ಕೇಳಿಸಿಕೊಳ್ಳುವ ಗೋಜಿಗೆ ಹೋಗುತ್ತಿಲ್ಲ. ಪರಿಣಾಮ ಇದೀಗ ನಮ್ಮ ತೆರಿಗೆ ಪಾಲಿನ ಹಣವನ್ನು ನಾವೇ ಪಡೆದುಕೊಳ್ಳಲು ಕೇಂದ್ರ ಸರ್ಕಾರದ ಎದುರು ಕೈಕಟ್ಟಿ ನಿಲ್ಲುವಂತಹ ಸ್ಥಿತಿ ಎದುರಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಬೇಸರ ವ್ಯಕ್ತಪಡಿಸಿದರು.
ಮುಂದುವರೆದು, “2019ರಲ್ಲಿ ಕೇಂದ್ರದ ಬಜೆಟ್ ಗಾತ್ರ ರೂ. 22 ಲಕ್ಷ ಕೋಟಿ. ಆ ಸಂದರ್ಭದಲ್ಲಿ ತೆರಿಗೆ, ಅನುದಾನದ ಹೆಸರಿನಲ್ಲಿ ಕರ್ನಾಟಕಕ್ಕೆ ರೂ. 46 ಸಾವಿರ ಕೋಟಿ ಹಣ ನೀಡಲಾಗಿತ್ತು. 2023ರಲ್ಲಿ ಕೇಂದ್ರದ ಬಜೆಟ್ ರೂ. 45 ಲಕ್ಷ ಕೋಟಿಗೆ ಏರಿಕೆಯಾಗಿತ್ತು. ಅಂದರೆ ಬಜೆಟ್ ಗಾತ್ರ ಶೇ.100 ರಷ್ಟು ಏರಿಕೆಯಾಗಿತ್ತು. ಆದರೆ, ಕರ್ನಾಟಕಕ್ಕೆ ಸಿಕ್ಕ ಪಾಲು ಕೇವಲ ರೂ. 50 ಸಾವಿರ ಕೋಟಿ ಮಾತ್ರ. ಇದು ದೇಶದ ಹಾಗೂ ರಾಜ್ಯದ ಭವಿಷ್ಯಕ್ಕೆ ಸರಿಯಲ್ಲ” ಎಂದು ವಿಷಾಧಿಸಿದರು.
ಜಿಎಸ್‌ಟಿ-ಸೆಸ್‌ನಲ್ಲೂ ರಾಜ್ಯಕ್ಕೆ ಅಪಾರ ನಷ್ಟ:
ಜಿಎಸ್‌ಟಿ ಜಾರಿಯಾದ ನಂತರ ರಾಜ್ಯದ ಆರ್ಥಿಕ ಸ್ವಾವಲಂಭನೆ ನೆಲ ಕಚ್ಚಿದೆ. ಜಿಎಸ್‌ಟಿಗೂ ಮುಂಚೆ ರಾಜ್ಯದ ಆದಾಯ ಶೇ.14 ರಿಂದ ಶೇ.16 ರಷ್ಟಿತ್ತು. ಆದರೆ, ಈ ಪ್ರಮಾಣ ಇದೀಗ ಶೇ.12ಕ್ಕೆ ಇಳಿದಿದೆ. ಇದರಿಂದಾಗಿ ರಾಜ್ಯದ ಜಿಡಿಪಿ ಇಳಿಮುಖವಾಗುತ್ತಿದೆ. ಸಮಾಜದಲ್ಲಿ ಹಣದ ಸಮಾನ ಹಂಚಿಕೆಯ ಪ್ರಮಾಣ ಶೇ.25 ರಷ್ಟು ಕುಸಿದಿದೆ. ಪರಿಣಾಮ ರಾಜ್ಯಕ್ಕೆ ಪ್ರತಿ ವರ್ಷ40 ರಿಂದ 50 ಸಾವಿರ ಕೋಟಿ ನಷ್ಟವಾಗುತ್ತಿದೆ ಎಂದರು.
ಇನ್ನೂ 2010ರಲ್ಲಿ ಶೇ.8 ರಿಂದ 10 ರಷ್ಟು ಆದಾಯ ಸೆಸ್ ಮೂಲಕ ಕೇಂದ್ರಕ್ಕೆ
ಹರಿಯುತ್ತಿತ್ತು. ಈ ಪ್ರಮಾಣ ಇದೀಗ ಶೇ.22ಕ್ಕೆ ಏರಿಕೆಯಾಗಿದೆ. ಆದರೂ, ರಾಜ್ಯಕ್ಕೆ ನಯಾಪೈಸೆಯೂ ಹಿಂತಿರುಗಿ ಬರುತ್ತಿಲ್ಲ ಎಂದು ತಿಳಿಸಿದರು.
ತೈಲ ತೆರಿಗೆಯಲ್ಲೂ ರಾಜ್ಯಕ್ಕಿಲ್ಲ ಪಾಲು!
ಕೇಂದ್ರ ಸರ್ಕಾರ 2014 ರಿಂದ ತೈಲದ ಮೇಲಿನ ತೆರಿಗೆಯನ್ನೂ ಶೇ.50 ರಷ್ಟು ಏರಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಗಣನೀಯವಾಗಿ ಇಳಿಸಿದ್ದ ಸಂದರ್ಭದಲ್ಲೂ ಸಹ ದೇಶದಲ್ಲಿ ಕೇಂದ್ರ ಸರ್ಕಾರ ತೆರಿಗೆಯನ್ನು ಮತ್ತಷ್ಟು ಏರಿಸಿತ್ತು.
ಕೇಂದ್ರ ಸರ್ಕಾರದ 2018-19ರ ಬಜೆಟ್‌ನಲ್ಲಿ ತೈಲ ಆದಾಯದ ಪ್ರಮಾಣ ರೂ. 2.18 ಲಕ್ಷ ಕೋಟಿ. ಆದರೆ, 2022-23 ಬಜೆಟ್‌ನಲ್ಲಿ ಈ ಪ್ರಮಾಣ 5.15 ಲಕ್ಷ ಕೋಟಿಗೆ ಏರಿಕೆಯಾಗಿದೆ. ಈ ಅವಧಿಯಲ್ಲಿ ರಾಜ್ಯ ಸರ್ಕಾರಗಳಿಗೆ ತೈಲದ ಮೇಲಿನ ತೆರಿಗೆಯನ್ನು ಏರಿಸಲು ಅವಕಾಶವೇ ಸಿಕ್ಕಿಲ್ಲ. ಎಲ್ಲಾ ಮೂಲಗಳಿಂದಲೂ ರಾಜ್ಯಕ್ಕೆ ಬರುವ ಆದಾಯ ಖೋತಾ ಆಗುತ್ತಿದೆ ಎಂದು ವಿವರಿಸಿದರು.
ಕರ್ನಾಟಕ ದೇಶದಲ್ಲೇ ಅತಿಹೆಚ್ಚು ತೆರಿಗೆ ಕಟ್ಟುವ ರಾಜ್ಯ. ನಮ್ಮ ಒಕ್ಕೂಟ ವ್ಯವಸ್ಥೆಯಲ್ಲಿ ಹಣ ಹಂಚಿಕೊಳ್ಳಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಕರ್ನಾಟಕದ ತೆರಿಗೆ ಹಣ ಹಿಂದುಳಿದ ರಾಜ್ಯಗಳ ಅಭಿವೃದ್ಧಿಗೆ ಉಪಯೋಗವಾದರೆ ನಮಗೂ ಸಂತೋಷವೇ. ಹಾಗೆಂದು ನಮ್ಮ ಕತ್ತನ್ನು ಹಿಸುಕುವ ಕೆಲಸವಾಗಬಾರದು. ನಮ್ಮ ಪಾಲಿನ ಹಣ ನಮಗೆ ಸಿಗದಿದ್ದರೆ, ನಾವು ಸದೃಢ ರಾಜ್ಯವನ್ನು ನಿರ್ಮಿಸುವುದು ಹೇಗೆ ಸಾಧ್ಯ? ಒಂದು ವೇಳೆ ನಾವು ದುರ್ಬಲಗೊಂಡರೆ, ಕೇಂದ್ರವೂ ದುರ್ಬಲವಾದಂತೆ. ಹೀಗಾಗಿ ಎಲ್ಲರೂ ಅವರವರ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.