ನಾಗ್ಪುರ: ಪುಟ್ಟ ಬಾಲಕನೋರ್ವ ಬಣ್ಣ ಹಾಕಿದ ಎಂಬ ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬಳು ಆತನ ಮೇಲೆ ಕುದಿಯುವ ಬಿಸಿನೀರು ಎರಚಿದ ಅಮಾನವೀಯ ಘಟನೆ ಮಹಾರಾಷ್ಟ್ರದ ನಾಗ್ಪುರದ ಕೊರಾಡಿಯಲ್ಲಿ ನಡೆದಿದೆ.
ಘಟನೆಯ ವಿವರ
ಮಾರ್ಚ್ 3ರಂದು ನಾಗ್ಪುರದ ಅರಾಮ್ಶಿನ್ ಪ್ರದೇಶದ ವಾರ್ಡ್ ಸಂಖ್ಯೆ 2ರಲ್ಲಿ ಈ ಭೀಕರ ಘಟನೆ ಸಂಭವಿಸಿದೆ. ನಾಲ್ಕು ವರ್ಷದ ಬಾಲಕ ಓಂ, ಸ್ಪ್ರೇ ಬಾಟಲಿಯೊಂದಿಗೆ ಬಣ್ಣದಾಟ ಆಡುತ್ತಿದ್ದನು. ಈ ವೇಳೆ ಆ ರಸ್ತೆಯಲ್ಲಿ ಬಕೆಟ್ ನಲ್ಲಿ ಬಿಸಿನೀರು ಹಿಡಿದುಕೊಂಡು ಬರುತ್ತಿದ್ದ ಸಿಂಧು ಠಾಕ್ರೆ ಎಂಬ ಮಹಿಳೆಯ ಮೇಲೆ ಬಾಲಕ ಆಟದ ಅಮಲಿನಲ್ಲಿ ಬಣ್ಣ ಸ್ಪ್ರೇ ಮಾಡಿದ್ದಾನೆ.
ಇದರಿಂದ ತೀವ್ರ ಆಕ್ರೋಶಗೊಂಡ ಮಹಿಳೆ, ಒಂದು ಕ್ಷಣವೂ ಯೋಚಿಸದೆ ತನ್ನ ಕೈಯಲ್ಲಿದ್ದ ಬಕೆಟ್ ನಲ್ಲಿದ್ದ ಕುದಿಯುವ ನೀರನ್ನು ಬಾಲಕನ ಮೇಲೆ ಸುರಿದಿದ್ದಾಳೆ. ಬಿಸಿನೀರು ಮೈಮೇಲೆ ಬೀಳುತ್ತಿದ್ದಂತೆ ಬಾಲಕ ಅಸಹನೀಯ ನೋವಿನಿಂದ ಕಿರುಚಾಡುತ್ತಾ ಓಡಿದ್ದಾನೆ. ಕೂಡಲೇ ಪಕ್ಕದಲ್ಲಿದ್ದ ಯುವತಿಯೊಬ್ಬಳು ತಣ್ಣೀರು ಸುರಿಯಲು ಪ್ರಯತ್ನಿಸಿದಾಗ, ಸಿಂಧು ಆ ಬಕೆಟ್ ಕಿತ್ತುಕೊಂಡು ತಣ್ಣೀರು ಸುರಿದಿದ್ದಾಳೆ. ಆದರೆ ಅಷ್ಟರಲ್ಲಾಗಲೇ ಮಗುವಿನ ದೇಹ ಸುಟ್ಟುಹೋಗಿತ್ತು.
ಆಸ್ಪತ್ರೆಗೆ ದಾಖಲು
ಈ ಘಟನೆಯಲ್ಲಿ ಬಾಲಕ ಓಂಗೆ ಶೇ. 45ರಷ್ಟು ಸುಟ್ಟ ಗಾಯಗಳಾಗಿದ್ದು, ಸದ್ಯ ನಾಗ್ಪುರದ ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಬಾಲಕನ ಬೆನ್ನು ಮತ್ತು ಮೈಭಾಗ ತೀವ್ರವಾಗಿ ಸುಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.
ವೈರಲ್ ಆದ ಸಿಸಿಟಿವಿ ದೃಶ್ಯ:
ಮಹಿಳೆಯ ಈ ರಾಕ್ಷಸೀ ಕೃತ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
What a MONSTER B!TCH 😡
Goes Full Psycho; Pours boiling Hot Water on 5yr Old kid because he wanted to play Holi with her 🤬 pic.twitter.com/1LuFLcrwcW— Mihir Jha (@MihirkJha) March 4, 2026








