ಹಾವೇರಿ : ರಾಜ್ಯದಲ್ಲಿ ಮತ್ತೊಂದು ಬರ್ಬರ ಹತ್ಯೆ ನಡೆದಿದ್ದು, ಮೊಬೈಲ್ ನಲ್ಲಿ ಹೆಚ್ಚು ಮಾತನಾಡಿದಕ್ಕೆ ಮಹಿಳೆಯೊಬ್ಬರನ್ನು ವ್ಯಕ್ತಿಯೊಬ್ಬರ ಕೊಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದ ಕೂನಬೇವು ಪ್ಲಾಟ್ ರಸ್ತೆಯ ಎಂ.ಜಿ. ಪಾಟೀಲ ಅವರ ಜೀನ್ ಕಾಂಪೌಂಡ್ ಬಳಿ ಲಲಿತಾ ಕರಬಸಪ್ಪ ಬ್ಯಾಡಗಿ (42) ಎಂಬುವವರ ಕೊಲೆ ನಡೆದಿದ್ದು, ಆರೋಪಿ ಚಂದ್ರಪ್ಪ ಶಿವಲಿಂಗಪ್ಪ ಸಣ್ಣಮಲ್ಲಪ್ಪನವರ (36) ಎಂಬುವವರನ್ನು ಬಂಧಿಸಿದ್ದಾರೆ.
ಬ್ಯಾಡಗಿ ತಾಲ್ಲೂಕಿನ ಕನವಳ್ಳಿಯ ಲಲಿತಾ ಅವರನ್ನು ಡಿ. 7ರಂದು ಬೆಳಿಗ್ಗೆ ಕೊಲೆ ಮಾಡಲಾಗಿತ್ತು. ಆರೋಪಿ ಚಂದ್ರಪ್ಪ ಹಾವೇರಿ ಜಿಲ್ಲೆ ಕಳ್ಳಿಹಾಳ ನಿವಾಸಿ. ಹೊಟೇಲ್ ನಲ್ಲಿ ಸಹಾಯಕ ಕೆಲಸ ಮಾಡುತ್ತಿದ್ದ. ಕೆಲಸದ ಸ್ಥಳದಲ್ಲಿಯೇ ಆತನಿಗೆ ಲಲಿತಾ ಪರಿಚಯವಾಗಿತ್ತು, ಲಲಿತಾ ಅವರ ಪತಿ 10 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಹೀಗಾಗಿ, ಅವರು ಊರು ಬಿಟ್ಟು ರಾಣೆಬೆನ್ನೂರಿಗೆ ಬಂದು ಹೋಟೆಲ್ ಹಾಗೂ ಮನೆಗಳಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.
ಆರೋಪಿ ಚಂದ್ರಪ್ಪ ಸಲುಗೆ ಬೆಳೆಸಿದ್ದ. ಆಗಾಗ ಮನೆಗೂ ಹೋಗಿ ಬರುತ್ತಿದ್ದ. ಲಲಿತಾ ಅವರ ಶೀಲ ಶಂಕಿಸಿದ್ದ ಚಂದ್ರಪ್ಪ, ಅದೇ ಕಾರಣಕ್ಕೆ ಕೊಲೆ ಮಾಡಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಲಲಿತಾ ಅವರು ಇತ್ತೀಚಿನ ದಿನಗಳಲ್ಲಿ ಮೊಬೈಲ್ನಲ್ಲಿ ಹೆಚ್ಚು ಮಾತನಾಡುತ್ತಿದ್ದರು. ಆರೋಪಿ ಚಂದ್ರಪ್ಪ ಸಹ ಆಗಾಗ ಕರೆ ಮಾಡುತ್ತಿದ್ದ. ಈ ಸಂದರ್ಭದಲ್ಲಿ, ‘ಮೊಬೈಲ್ ಬಳಕೆದಾರರು ಮತ್ತೊಂದು ಕರೆಯಲ್ಲಿ ನಿರತರಾಗಿದ್ದಾರೆ ಎಂದು ಸಂಭಾಷಣೆ ಬರುತ್ತಿತ್ತು. ಇದರಿಂದ ಸಿಟ್ಟಾದ ಚಂದ್ರಪ್ಪ, ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ.








