ಜಮ್ಮು: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಡಾ. ಫಾರೂಕ್ ಅಬ್ದುಲ್ಲಾ ಅವರ ಮೇಲೆ ಬುಧವಾರ ರಾತ್ರಿ ಭೀಕರ ಹತ್ಯೆ ಯತ್ನ ನಡೆದಿದೆ. ಜಮ್ಮುವಿನ ಗ್ರೇಟರ್ ಕೈಲಾಶ್ ಪ್ರದೇಶದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ದುಷ್ಕರ್ಮಿಯೊಬ್ಬ ಫಾರೂಕ್ ಅಬ್ದುಲ್ಲಾ ಅವರ ತಲೆಯ ಹಿಂಭಾಗಕ್ಕೆ ಪಿಸ್ತೂಲ್ ಇಟ್ಟು ಗುಂಡು ಹಾರಿಸಿದ್ದು, ಅವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಡೆದಿದ್ದೇನು?
ಪಕ್ಷದ ಮುಖಂಡರೊಬ್ಬರ ಮಗನ ಮದುವೆಗೆ ಫಾರೂಕ್ ಅಬ್ದುಲ್ಲಾ ಮತ್ತು ಉಪಮುಖ್ಯಮಂತ್ರಿ ಸುರಿಂದರ್ ಚೌಧರಿ ಆಗಮಿಸಿದ್ದರು. ಸಮಾರಂಭ ಮುಗಿಸಿ ಹೊರಬರುವಾಗ, ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ವೇಗವಾಗಿ ಬಂದು ಅಬ್ದುಲ್ಲಾ ಅವರ ಕಿವಿಯ ಹತ್ತಿರವೇ ಪಿಸ್ತೂಲ್ನಿಂದ ಗುಂಡು ಹಾರಿಸಿದ್ದಾನೆ. ಕೂಡಲೇ ಎಚ್ಚೆತ್ತ ಭದ್ರತಾ ಸಿಬ್ಬಂದಿ ದುಷ್ಕರ್ಮಿಯನ್ನು ಹಿಡಿದು ಕೆಳಕ್ಕೆ ತಳ್ಳಿದ್ದರಿಂದ ಗುಂಡು ಗುರಿ ತಪ್ಪಿದೆ.
ಆರೋಪಿಯ ಬಂಧನ:
ಬಂಧಿತ ಆರೋಪಿಯನ್ನು ಜಮ್ಮುವಿನ ಪುರಾಣಿ ಮಂಡಿ ನಿವಾಸಿ ಕಮಲ್ ಸಿಂಗ್ ಜಮ್ವಾಲ್ (63) ಎಂದು ಗುರುತಿಸಲಾಗಿದೆ. ಆತ ದಾಳಿಯ ಸಮಯದಲ್ಲಿ ಅಮಲೇರಿದ ಸ್ಥಿತಿಯಲ್ಲಿದ್ದ ಎನ್ನಲಾಗಿದ್ದು, ಕಳೆದ 20 ವರ್ಷಗಳಿಂದ ಫಾರೂಕ್ ಅಬ್ದುಲ್ಲಾ ಅವರನ್ನು ಗುರಿಯಾಗಿಸಲು ಕಾಯುತ್ತಿದ್ದೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ಆತನಿಂದ ಪರವಾನಗಿ ಹೊಂದಿದ .32 ರೇವಲ್ವರ್ ಅನ್ನು ವಶಪಡಿಸಿಕೊಳ್ಳಲಾಗಿದೆ.
#WATCH | Jammu, J&K: An incident of firing occurred at a function where JKNC chief Farooq Abdullah and Deputy CM Surinder Choudhary were present. One person has been arrested. No injuries have been reported.
CCTV visuals showing the moment when the incident took place. pic.twitter.com/pnoD3f9fRJ
— ANI (@ANI) March 11, 2026








