ಆಂಧ್ರಪ್ರದೇಶ : ಬೆಟ್ಟಿಂಗ್ ಕಟ್ಟಿ 19 ಬಿಯರ್ ಕುಡಿದು ಇಬ್ಬರು ಸಾಫ್ಟ್ ವೇರ್ ಉದ್ಯೋಗಿಗಳು ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಕೆ.ವಿ.ಪಲ್ಲಿ ಮಂಡಲದ ಬಂಡ ಪಾಡಿಪಲ್ಲಿಯಲ್ಲಿ ನಡೆದಿದೆ.
ರಾಯಚೋಟಿ ಡಿಎಸ್‌ಪಿ ಕೃಷ್ಣಮೋಹನ್ ಸಾವಿಗೆ ಕಾರಣ ಅತಿಯಾದ ಮದ್ಯಪಾನ ಎಂದು ಹೇಳಿದ್ದಾರೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಆರು ಸ್ನೇಹಿತರು ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯ ಸಮಯದಲ್ಲಿ, ಮಣಿಕುಮಾರ್ (34) ಮತ್ತು ಪುಷ್ಪರಾಜ್ (26) ಎಂಬ ಇಬ್ಬರು ಸಾಫ್ಟ್‌ವೇರ್ ಉದ್ಯೋಗಿಗಳು ಪರಸ್ಪರ ಪೈಪೋಟಿ ನಡೆಸಿ ಮದ್ಯಪಾನ ಮಾಡಿದ್ದರು.
ಕಳೆದ ಶನಿವಾರ ಮಧ್ಯಾಹ್ನ 3 ರಿಂದ ಸಂಜೆ 7.30 ರವರೆಗೆ ಇಬ್ಬರೂ ಒಟ್ಟಿಗೆ ಒಟ್ಟು 19 ಬಡ್ ವೈಸರ್ ಟಿನ್ ಬಿಯರ್‌ಗಳನ್ನು ಕುಡಿದಿದ್ದಾರೆ ಎಂದು ಪೊಲೀಸರು ಕಂಡುಕೊಂಡರು. ಅತಿಯಾದ ಮದ್ಯಪಾನದಿಂದಾಗಿ ತೀವ್ರ ನಿರ್ಜಲೀಕರಣದಿಂದ ಬಳಲುತ್ತಿದ್ದ ಇಬ್ಬರ ಸ್ಥಿತಿ ಹದಗೆಟ್ಟಿತು. ತಕ್ಷಣ ಆಸ್ಪತ್ರೆಗೆ ಸಾಗಿಸುವಾಗ ಮಣಿಕುಮಾರ್ ದಾರಿಯಲ್ಲಿ ಸಾವನ್ನಪ್ಪಿದರೆ, ಪುಷ್ಪರಾಜ್ ಚಿಕಿತ್ಸೆ ಪಡೆಯುವಾಗ ನಿಧನರಾದರು. ಪ್ರಾಥಮಿಕ ತನಿಖೆ ಮತ್ತು ಮರಣೋತ್ತರ ವರದಿಯಲ್ಲಿ ಸಾವಿಗೆ ಕಾರಣ ಅತಿಯಾದ ಮದ್ಯಪಾನ ಎಂದು ತಿಳಿದುಬಂದಿದೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.








