ಬಳ್ಳಾರಿ : ಜಿಲ್ಲೆಯ ವಿವಿಧೆಡೆ ವೈದ್ಯಕೀಯ ಪದವಿ ಪಡೆಯದೇ ತಾವು ವೈದ್ಯರೆಂದು ಬಿಂಬಿಸಿ ವೈದ್ಯ ವೃತ್ತಿ ಮಾಡುತ್ತಿದ್ದ ನಕಲಿ ವೈದ್ಯರ ಕ್ಲಿನಿಕ್ ಗಳ ಮೇಲೆ ದಾಳಿ ನಡೆಸಿ ಸೀಜ್ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ತಿಳಿಸಿದ್ದಾರೆ.
ನಗರದ ಮುಲ್ಲಂಗಿ ಸಂಜೀವಪ್ಪ ಬೀದಿ, ಕೊಲ್ಮಿಚೌಕ್ ಹತ್ತಿರದಲ್ಲಿ ಬಿಸ್ವಾಸ್ ಎಂಬುವವ ಯಾವುದೇ ವೈದ್ಯಕೀಯ ಪದವಿ ಮಾನ್ಯತೆ ಪಡೆಯದೇ ನಕಲಿ ವೈದ್ಯನಾಗಿದ್ದು, ತಾನು ಫೈಲ್ಸ್ ವೈದ್ಯನೆಂದು ಸಾರ್ವಜನಿಕರಲ್ಲಿ ಸುಳ್ಳು ಹೇಳಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ. ಸಾರ್ವಜನಿಕರಿಂದ ದೂರು ಬಂದ ಮೇಲೆ ಕ್ಲಿನಿಕ್ ಮೇಲೆ ದಾಳಿ ಮಾಡಿ ಕ್ಲಿನಿಕ್ ಸೀಜ್ ಮಾಡಲಾಗಿದೆ.
ಕುಡುತಿನಿ ಗ್ರಾಮದಲ್ಲಿ ಮತ್ತೊಬ್ಬ ನಕಲಿ ವೈದ್ಯ ಎಮ್.ಡಿ ಗೌಸ್, ಸಾರ್ವಜನಿಕರಿಗೆ ವೈದ್ಯನೆಂದು ಬಿಂಬಿಸಿ ಯಾವುದೇ ವೈದ್ಯಕೀಯ ಪದವಿ ಪಡೆಯದೇ ಕೇವಲ 10ನೇ ತರಗತಿಯವರೆಗೆ ಓದಿ, ಔಷಧಿಗಳ ಬಗ್ಗೆ ಮಾಹಿತಿ ಪಡೆದುಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೇಳೆ ಕ್ಲಿನಿಕ್ ಮೇಲೆ ದಾಳಿ ಮಾಡಿ ಕ್ಲಿನಿಕ್‌ನ್ನು ಸೀಜ್ ಮಾಡಲಾಗಿದೆ.
ಅದೇರೀತಿಯಾಗಿ ಬಳ್ಳಾರಿ ತಾಲ್ಲೂಕಿನ ಸಿರಿವಾರ ಗ್ರಾಮದಲ್ಲಿ ಡಾ.ಪ್ರಕಾಶ್ ಎಂಬುವವರು, ಬಿ.ಎ.ಎಮ್.ಎಸ್ ವಿದ್ಯಾರ್ಹತೆ ಪಡೆದು ಚಿಕಿತ್ಸೆ ನೀಡುತ್ತಿದ್ದು, ಕೆ.ಪಿ.ಎಮ್.ಇ ಕಾಯ್ದೆ ಕಾಯ್ದೆ ಉಲ್ಲಂಘನೆ ಮಾಡಿರುವುದು ಕಂಡುಬದಿದೆ. ಇವರ ಎಮ್.ಜಿ. ಕ್ಲಿನಿಕ್ ಅನ್ನು ಸಹ ಸೀಜ್ ಮಾಡಲಾಗಿದೆ.
ಹಾಗಾಗಿ ಸಾರ್ವಜನಿಕರು ತಮ್ಮ ಆರೋಗ್ಯದ ದೃಷ್ಟಿಯಿಂದ ಅಧೀಕೃತ ವೈದ್ಯ ಪದವಿ ಪಡೆದ ವೈದ್ಯರ ಬಳಿ ತಪಾಸಣೆ ಮಾಡಿಸುವ ಮೂಲಕ ಚಿಕಿತ್ಸೆ ಪಡೆಯುವುದರಿಂದ ಆರೋಗ್ಯದ ಮೇಲೆ ಉಂಟಾಗಬಹುದಾದ ಗಂಭೀರ ಪರಿಣಾಮಗಳನ್ನು ತಡೆಯಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದ್ದಾರೆ.
ಗ್ರಾಮಗಳಲ್ಲಿ ವೈದ್ಯ ವೃತ್ತಿ ಮಾಡುತ್ತಿರುವವರು ಕಂಡುಬAದಲ್ಲಿ ಸಾರ್ವಜನಿಕರು ಅವರ ವೈದ್ಯಕೀಯ ಪದವಿಯ ಮಾಹಿತಿಯನ್ನು ಪಡೆದುಕೊಂಡು ಚಿಕಿತ್ಸೆ ಪಡೆಯಬೇಕು. ಒಂದು ವೇಳೆ ನಕಲಿ ವೈದ್ಯರು ಎಂದು ಕಂಡುಬAದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಾಲಯಕ್ಕೆ ದೂರು ನೀಡಿದರೆ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007 ರ ಅಡಿಯಲ್ಲಿ ಕ್ರಮ ಜರುಗಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ದಾಳಿಯ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆರ್.ಅಬ್ದುಲ್ಲಾ ಮತ್ತು ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಹನುಮಂತಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಹೆಚ್ ಗೋಪಾಲ್, ಆರ್.ಬಿ.ಎಸ್.ಕೆ ಸಮಾಲೋಚಕ ಮನೋಹರ್ ಹಾಗೂ ವೈದ್ಯರು ಇದ್ದರು.








