ಕಾರವಾರ : ಕಾರವಾರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಹೊಟ್ಟೆಗೆ ಮೀನಿನ ಮೂತಿ ಚುಚ್ಚಿದ ಪರಿಣಾಮ ಯುವಕನೊಬ್ಬ ಮೃತಪಟ್ಟಿದ್ದಾನೆ.
ಕಾರವಾರ ತಾಲೂಕಿನ ಮಾಜಾಳಿ ಗ್ರಾಮದ ದಾಂಡೇಭಾಗ ನಿವಾಸಿ 24 ವರ್ಷದ ಅಕ್ಷಯ ಅನಿಲ ಮಾಜಾಳಿಕರ್ ಮೃತ ಯುವಕ. ಅಕ್ಷಯ ಮಂಗಳವಾರ (ಅ.14) ಎಂದಿನಂತೆ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದಾಗ ಈ ದುರಂತ ಸಂಭವಿಸಿದೆ.
ಎರಡು ದಿನಗಳ ಹಿಂದೆ ಅಕ್ಷಯ್ ಮೀನುಗಾರಿಕೆಗೆ ತೆರಳಿದಾಗ ಸ್ಥಳೀಯವಾಗಿ ‘ತೋಳೆ ಕಾಂಡೆ ಮೀನು’ ಎಂದು ಕರೆಯಲಾಗುವ ಅಟ್ಲಾಂಟಿಕ್ ನೀಡಲ್ ಫಿಶ್ ಆತನ ಹೊಟ್ಟೆಗೆ ಚುಚ್ಚಿತ್ತು. ಗಾಯಗೊಂಡಿದ್ದ ಆತನನ್ನು ಕಾರವಾರ ಕ್ರಿಮ್ಸ್ ಬೋಧಕ ಆಸ್ಪತ್ರೆಗೆ ಸೇರಿಸಲಾಗಿತ್ತು. ವೈದ್ಯರು ಗಾಯಕ್ಕೆ ಹೊಲಿಗೆ ಹಾಕಿ ಚಿಕಿತ್ಸೆ ನೀಡಿದ್ದರು. ಆದರೆ, ಆತ ಗುಣಮುಖವಾಗದ ಕಾರಣ ಮತ್ತೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಬುಧವಾರ ರಾತ್ರಿ ಯುವಕ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.
ವೈದ್ಯರ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ಮತ್ತು ಸ್ಥಳೀಯ ಮೀನುಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.