ಮುಂಬೈ : ಮುಂಬೈನಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದ್ದು, ಕಸದ ರಾಶಿಗಳ ಮೇಲೆ ವಯಸ್ಸಾದ ಮಹಿಳೆಯೊಬ್ಬರನ್ನ ಎಸೆಯಲಾಗಿದೆ. ಕ್ಯಾನ್ಸರ್’ನಿಂದ ಬಳಲುತ್ತಿದ್ದ ಮಹಿಳೆಯನ್ನ ಆಕೆಯ ಮೊಮ್ಮಗನೇ ಕಸದ ಬುಟ್ಟಿಗೆ ಎಸೆದಿದ್ದಾನೆ ಎಂದು ಆರೋಪಿಸಲಾಗಿದೆ. ಪೊಲೀಸರು ತನಿಖೆ ಆರಂಭಿಸಿ, ಮಹಿಳೆಯ ಕುಟುಂಬಕ್ಕಾಗಿ ಹುಡುಕಾಟ ನಡೆಸಿದ್ದಾರೆ.
ಶನಿವಾರ ಮುಂಬೈ ಪೊಲೀಸರು ನಗರದ ಆರೆ ಕಾಲೋನಿಯ ರಸ್ತೆಯಲ್ಲಿರುವ ಕಸದ ಗುಡ್ಡೆಯ ಬಳಿ 60 ವರ್ಷದ ಯಶೋದಾ ಗಾಯಕ್ವಾಡ್ ಎಂಬ ಮಹಿಳೆಯನ್ನ ಅತ್ಯಂತ ದುರ್ಬಲ ಸ್ಥಿತಿಯಲ್ಲಿ ಕಂಡುಕೊಂಡಾಗ ಈ ಘಟನೆ ಬೆಳಕಿಗೆ ಬಂದಿದೆ.
ತನಿಖೆಯ ನಂತರ, ಮಹಿಳೆ ತನ್ನ ಮೊಮ್ಮಗ ಅವಳನ್ನ ಅಲ್ಲಿಯೇ ಬಿಟ್ಟು ಹೋಗಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೆಳಿಗ್ಗೆ ಮಹಿಳೆ ಪತ್ತೆಯಾಗಿದ್ದರೂ, ಸಂಜೆ 5:30ರ ಹೊತ್ತಿಗೆ ಪೊಲೀಸರು ಮಹಿಳೆಯನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಸ್ಥಿತಿಗತಿಯನ್ನ ಪರಿಗಣಿಸಿ ಹಲವಾರು ಆಸ್ಪತ್ರೆಗಳು ಸೇರಿಸಿಕೊಳ್ಳಲು ನಿರಾಕರಿಸಿದ ನಂತರ ಅವರನ್ನ ಕೂಪರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಿಳೆ ಚರ್ಮದ ಕ್ಯಾನ್ಸರ್’ನಿಂದ ಬಳಲುತ್ತಿದ್ದು, ತನ್ನ ಕುಟುಂಬ ಸದಸ್ಯರ ಎರಡು ವಿಳಾಸಗಳನ್ನ ಹಂಚಿಕೊಂಡಿದ್ದಾರೆ. ಒಂದು ಮಲಾಡ್ ಮತ್ತು ಇನ್ನೊಂದು ಕಾಂಡಿವಲಿ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಕುಟುಂಬದ ಕುರಿತು ಹೆಚ್ಚಿನ ವಿವರಗಳನ್ನ ನಿರೀಕ್ಷಿಸಲಾಗುತ್ತಿದೆ. ಸಂಬಂಧಿಕರನ್ನು ಪತ್ತೆಹಚ್ಚಲು ಅವರ ಚಿತ್ರವನ್ನು ವಿವಿಧ ಪೊಲೀಸ್ ಠಾಣೆಗಳಲ್ಲಿ ಹಂಚಿಕೊಳ್ಳಲಾಗಿದೆ.