ಬಾರಾಬಂಕಿ : ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ವರದಿಯಾಗಿದ್ದು, ಶನಿವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯ ಜೇಬಿನೊಳಗಿದ್ದ ಮೊಬೈಲ್ ಸ್ಫೋಟಗೊಂಡಿದೆ. ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದೊಳಗೆ ಈ ಘಟನೆ ನಡೆದಿದೆ.
ಮಾಧ್ಯಮದಲ್ಲಿ ಪ್ರಕಟವಾದ ವರದಿಯ ಪ್ರಕಾರ, ಕಾರು ಡಿಕ್ಕಿ ಹೊಡೆದ ಪರಿಣಾಮ ಅವಿನಾಶ್ ಪಾಲ್ ಗಾಯಗೊಂಡಿದ್ದಾರೆ. ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆಯ ಸಮಯದಲ್ಲಿ, ಆತನ ಜೇಬಿನಿಂದ ಹೊಗೆ ಹೊರಬರಲು ಆರಂಭವಾಗಿದ್ದು, ಬಳಿಕ ಸ್ಪೋಟಗೊಂಡಿದೆ ಎಂದು ವರದಿಯಾಗಿದೆ.
ಕೆಲವೇ ಸೆಕೆಂಡುಗಳಲ್ಲಿ ಈ ಸ್ಫೋಟ ಸಂಭವಿಸಿ ವಾರ್ಡ್ ಒಳಗೆ ಬೆಂಕಿ ಹೊತ್ತಿಕೊಂಡಿದ್ದು, ವಾರ್ಡ್ ಒಳಗೆ ಇದ್ದ ಇತರ ರೋಗಿಗಳು ಮತ್ತು ಜನರಲ್ಲಿ ಭಯ ಆವರಿಸಿದೆ. ಆಸ್ಪತ್ರೆ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಬೆಂಕಿಯನ್ನ ನಂದಿಸಿದರು. ಕೊತ್ವಾಲಿ ಪ್ರದೇಶದ ಜಿಲ್ಲಾ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.