ಬೆಂಗಳೂರು : ಹೆರಿಗೆಯ ನಂತರ ನವಜಾತ ಶಿಶುಗಳನ್ನು ಬಿಟ್ಟು ಮಹಿಳೆಯರಿಬ್ಬರು ಪರಾರಿಯಾದ ಘಟನೆ ಬಾಗಲಕೋಟೆ ಹಾಗೂ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯ ನಂತರ ನವಜಾತ ಹೆಣ್ಣು ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ತಾಯಿ ಪರಾರಿಯಾದ ಘಟನೆ ಇತ್ತೀಚೆಗೆ ನಡೆದಿದೆ. ಹೆರಿಗೆಯಾದ ನಂತರ ಆಸ್ಪತ್ರೆ ಸಿಬ್ಬಂದಿ ಒಪಿಡಿ ಮಾಡಿಸಿ ತಾಯಿ ಕಾರ್ಡ್ ಕೊಡಿ ಎಂದು ಮಹಿಳೆ ಕೇಳಿದ್ದಾಳೆ. ನಂತರ ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಬಾಣಂತಿ ನಾಪತ್ತೆಯಾಗಿದ್ದಾಳೆ.
ಮಹಿಳೆ ಆಸ್ಪತ್ರೆಯಿಂದ ಹೊರ ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹೆಣ್ಣು ಮಗು ಎಂಬ ಕಾರಣಕ್ಕೆ ಮಗು ಬಿಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಡಾಪ್ಶನ್ ಸೆಂಟರ್ಗೆ ಮಗುವನ್ನು ಹಸ್ತಾಂತರ ಮಾಡಲಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಮಗು ಆರೋಗ್ಯವಾಗಿದೆ.
ಇನ್ನೂ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬಿ.ಜಿ. ನಗರದ ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆ ಗೇಟ್ ಮುಂಭಾಗ ಆಗತಾನೆ ಜನಿಸಿದ ಹೆಣ್ಣು ಮಗುವನ್ನು ತಾಯಿಯೊಬ್ಬಳು ಬಿಟ್ಟು ಹೋದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಆಸ್ಪತ್ರೆಯ ಗೇಟ್ ಮುಂಭಾಗ ಮರದ ಕೆಳಗೆ ಮಗು ಅಳುವುದನ್ನು ಗಮನಿಸಿದ ಸ್ಥಳೀಯರು ಆಸ್ಪತ್ರೆಯ ಸಿಬ್ಬಂದಿ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಮಗುವಿಗೆ ಆದಿಚುಂಚನಗಿರಿ ಆಸ್ಪತ್ರೆಯ ಮಕ್ಕಳ ಸುರಕ್ಷತಾ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.