ಹರಿಯಾಣ : ದೇಶದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ಬೆಳಕಿಗೆ ಬಂದಿದ್ದು, ಹರಿಯಾಣದ ನುಹ್ ಜಿಲ್ಲೆಯಲ್ಲಿ ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ಬಾಲಕಿಯ ಶವವನ್ನು ಎಸೆಯುವ ಮುನ್ನ ಆಕೆಯ ಕೈ ಕಾಲು ಮುರಿದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ನವೆಂಬರ್ 30 ರ ಶನಿವಾರ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಬಾಲಕಿ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ ಸಂಜೆ 4 ಗಂಟೆ ಸುಮಾರಿಗೆ ಗ್ರಾಮದ ವ್ಯಕ್ತಿಯೊಬ್ಬರು ಆಕೆಯನ್ನು ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಹಳ ಹೊತ್ತಾದರೂ ಬಾಲಕಿ ಮನೆಗೆ ಬಾರದೆ ಇದ್ದಾಗ ಕುಟುಂಬಸ್ಥರು ಆಕೆಗಾಗಿ ಹುಡುಕಾಟ ನಡೆಸಿದ್ದಾರೆ. ಬಾಲಕಿಯನ್ನು ಬಹಳ ಹೊತ್ತು ಶೋಧ ನಡೆಸಿದ ಬಳಿಕ ರಾತ್ರಿ 11 ಗಂಟೆ ಸುಮಾರಿಗೆ ಆಕೆಯ ರಕ್ತ ತೋಯ್ದ ದೇಹ ಪತ್ತೆಯಾಗಿದೆ. ಬಳಿಕ ಬಾಲಕಿಯ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪಿನಂಗ್ವಾ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಬಾಲಕಿಯ ಮೇಲೆ ಮೊದಲು ಅತ್ಯಾಚಾರ ಎಸಗಿ ನಂತರ ಕೊಲೆ ಮಾಡಲಾಗಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಬಾಲಕಿಯ ಕುಟುಂಬಸ್ಥರು ನೀಡಿದ ಪೊಲೀಸ್ ದೂರಿನ ಪ್ರಕಾರ, ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಬಳಿಕ ಆರೋಪಿ ಆಕೆಯ ಕೈಕಾಲುಗಳನ್ನು ಮುರಿದು ನಂತರ ಶವವನ್ನು ಎಸೆದಿದ್ದಾನೆ. ಪ್ರಾಥಮಿಕ ತನಿಖೆಯಿಂದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಾಲ್ಕು ತಂಡಗಳನ್ನು ರಚಿಸಿ ಆರೋಪಿಯನ್ನು ಮರೋರ ಗ್ರಾಮದ ಬಳಿ ಬಂಧಿಸಲಾಗಿದೆ. ಆರೋಪಿಯನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪಿನಂಗ್ವಾ ಎಸ್‌ಎಚ್‌ಒ ಇನ್ಸ್‌ಪೆಕ್ಟರ್ ಸುಭಾಷ್ ಚಂದ್ ತಿಳಿಸಿದ್ದಾರೆ.