ಬೆಂಗಳೂರು: ಬೆಂಗಳೂರಿನಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಸಿಮೆಂಟ್ ಇಟ್ಟಿಗೆಗಳು ಪಕ್ಕದ ಮನೆಯ ಮೇಲೆ ಬಿದ್ದು 4 ವರ್ಷದ ಮಗು ಮೃತಪಟ್ಟಿರುವ ಘಟನೆ ನಡೆದಿದೆ.
ಬೆಂಗಳೂರಿನ ಎಚ್‌ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಮಧ್ಯಾಹ್ನ 3.30ರ ಸುಮಾರಿಗೆ ಅವಘಡ ಸಂಭವಿಸಿದ್ದು, ಮನುಶ್ರೀ (4) ಎಂಬ ಮಗು ಮೃತಪಟ್ಟಿದ್ದರೆ, ಆನಂದ್ (6), ಶ್ರೀಯಾನ್ (2) ಹಾಗೂ ಶೇಖರ್ (5) ಎಂಬ ಮಕ್ಕಳು ಗಾಯಗೊಂಡಿದ್ದಾರೆ.
ಚಿನ್ನಪ್ಪನಹಳ್ಳಿ ಯಲ್ಲಿ ಸುಬ್ಬಾರಾವ್ ಎಂಬುವರ ಮಾಲೀಕತ್ವದ ಕಟ್ಟಡ ಕಾಮಗಾರಿ ನಡೆಯುತ್ತಿತ್ತು. ಕಟ್ಟಡದ ಮೇಲಿಂದ 10-12 ಸಿಮೆಂಟ್ ಇಟ್ಟಿಗೆಗಳು ಪಕ್ಕದಲ್ಲೇ ಇದ್ದ ಶೀಟಿನ ಮನೆ ಮೇಲೆ ಬಿದ್ದವು. ಮನೆಯ ಒಳಗೆ ಆಟವಾಡುತ್ತಿದ್ದ ನಾಲ್ಕು ಮಕ್ಕಳ ಪೈಕಿ ಒಂದು ಮಗುವಿನ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಬಿದ್ದಿದೆ. ಬಿದ್ದ ರಭಸಕ್ಕೆ ತೀವ್ರ ಗಾಯಗೊಂಡಿದ್ದ ಮಗು ಮೃತಪಟ್ಟಿದೆ.
ಘಟನೆ ಸಂಬಂಧ ಕಟ್ಟಡದ ಮಾಲೀಕ ಸುಬ್ಬಾರಾವ್ ವಿರುದ್ಧ ಪೊಲೀಸರು ಎಫ್ ಐ ಆರ್ಿ ದಾಖಲಿಸಿಕೊಂಡಿದ್ದಾರೆ. ಕಟ್ಟಡ ಕಾಮಗಾರಿ ವೇಳೆ ಸುರಕ್ಷಿತ ಕ್ರಮ ಕೈಗೊಳ್ಳದ ಕಾರಣ ದುರಂತ ಘಟಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.








