ನವದೆಹಲಿ: ಪ್ರಸಿದ್ಧ ಬಾಲ ಆಧ್ಯಾತ್ಮಿಕ ಭಾಷಣಕಾರ ಅಭಿನವ್ ಅರೋರಾ ಅವರ ಕಾರಿನ ಮೇಲೆ ಕಿಡಿಗೇಡಿಗಳ ಗುಂಪು ದಾಳಿ ಮಾಡಿರುವ ಘಟನೆ ನಡೆದಿದೆ. ಅಭಿನವ್ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ, ಗುಂಪೊಂದು ಕಾರಿನ ಕಿಟಕಿ ಮತ್ತು ಗಾಜುಗಳನ್ನು ಪುಡಿಪುಡಿ ಮಾಡುತ್ತಿರುವುದು ಕಂಡುಬಂದಿದೆ.
ವಿಶೇಷವೆಂದರೆ, ಸ್ಥಳದಲ್ಲಿ ಪೊಲೀಸ್ ಅಧಿಕಾರಿಗಳು ಇದ್ದ ಹೊರತಾಗಿಯೂ ಕಿಡಿಗೇಡಿಗಳು ಕಾರಿನ ವಿಂಡ್ಶೀಲ್ಡ್ ಅನ್ನು ಧ್ವಂಸ ಮಾಡಿದ್ದಾರೆ. ಕಾರಿನ ಗಾಜುಗಳು ಒಡೆಯುತ್ತಿದ್ದಂತೆ ಒಳಗಿದ್ದ ಮಹಿಳೆಯೊಬ್ಬರು ಜೋರಾಗಿ ಕಿರುಚುತ್ತಿರುವುದು ಮತ್ತು 10 ವರ್ಷದ ಅಭಿನವ್ ದಾಳಿಕೋರರನ್ನು ನಿಲ್ಲಿಸುವಂತೆ ಬೇಡಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಕೇಳಿಬಂದಿದೆ.
ಘಟನೆಯ ನಂತರ ಅಭಿನವ್ ಅವರು ನವಾಜ್ ದಿಯೋಬಂದಿ ಅವರ ಕವಿತೆಯ ಸಾಲುಗಳನ್ನು ಹಂಚಿಕೊಳ್ಳುವ ಮೂಲಕ, ಹಿಂಸಾಚಾರದ ವೇಳೆ ಮೌನವಾಗಿರುವುದರ ಅಪಾಯಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಧರ್ಮದ ಬಣ್ಣ ಬಳಿಯಬೇಡಿ ಎಂದ ಅಭಿನವ್:
ಘಟನೆಯ ಬಗ್ಗೆ ಸ್ಪಷ್ಟನೆ ನೀಡಿರುವ ಅಭಿನವ್, “ಈ ದಾಳಿಯನ್ನು ಯಾವುದೇ ಧರ್ಮ ಅಥವಾ ಸಮುದಾಯಕ್ಕೆ ಜೋಡಿಸಬಾರದು. ಸಿಖ್ ಧರ್ಮವು ಧೈರ್ಯ, ಸೇವೆ ಮತ್ತು ಮಾನವೀಯತೆಗೆ ಹೆಸರಾಗಿದೆ. ಕೆಲವು ವ್ಯಕ್ತಿಗಳು ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ಹೊಣೆ ಮಾಡುವುದು ಸರಿಯಲ್ಲ” ಎಂದು ವಿನಂತಿಸಿದ್ದಾರೆ.
ಮೂವರ ಬಂಧನ: ದೆಹಲಿ ಪೊಲೀಸರು ಈ ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.ದಾಳಿಗೆ ನಿಖರವಾದ ಕಾರಣವೇನು ಎಂಬ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಅಭಿನವ್ ಅವರ ಕುಟುಂಬವು ಸದ್ಯ ಸುರಕ್ಷಿತವಾಗಿದ್ದರೂ, ಸಾರ್ವಜನಿಕವಾಗಿ ನಡೆದ ಈ ದಾಳಿಯು ಭದ್ರತೆಯ ಬಗ್ಗೆ ಆತಂಕ ಮೂಡಿಸಿದೆ.








