ಬೆಂಗಳೂರು: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮತ್ತು ಡೇಟಾ ಸೆಂಟರ್‌ಗಳ ಅತಿಯಾದ ನೀರು ಹಾಗೂ ವಿದ್ಯುತ್ ಬಳಕೆಯ ಬಗ್ಗೆ ಆತಂಕ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಕರ್ನಾಟಕ ಸರ್ಕಾರವು ತನ್ನ ‘ಡೇಟಾ ಸೆಂಟರ್ ನೀತಿ’ಯನ್ನು ಮರುಪರಿಶೀಲಿಸಲು ನಿರ್ಧರಿಸಿದೆ.
ವಿಧಾನಸಭೆಯಲ್ಲಿ ಶಾಸಕ ಧೀರಜ್ ಮುನಿರಾಜು ಅವರ ಪ್ರಶ್ನೆಗೆ ಉತ್ತರಿಸಿದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಡೇಟಾ ಸೆಂಟರ್‌ಗಳಿಂದ ಪರಿಸರದ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡರು.
ಚಾಟ್ ಜಿಪಿಟಿಯಂತಹ ಎಐ ತಂತ್ರಜ್ಞಾನದಲ್ಲಿ ಕೇವಲ 5 ಪ್ರಶ್ನೆಗಳನ್ನು ಕೇಳಿದರೆ ಸುಮಾರು 500 ಮಿಲಿ ಲೀಟರ್ ನೀರು ಬಳಕೆಯಾಗುತ್ತದೆ ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ ಪ್ರಸ್ತುತ 32 ಖಾಸಗಿ ಡೇಟಾ ಸೆಂಟರ್‌ಗಳು ಕಾರ್ಯನಿರ್ವಹಿಸುತ್ತಿವೆ. ಒಂದು ಮೆಗಾವಾಟ್ ಸಾಮರ್ಥ್ಯದ ಡೇಟಾ ಸೆಂಟರ್ ಸ್ಥಾಪಿಸಲು ಸುಮಾರು 70 ಕೋಟಿ ರೂ. ವೆಚ್ಚವಾಗುತ್ತದೆ ಮತ್ತು ಇದಕ್ಕೆ ಒಂದು ಎಕರೆ ಪ್ರದೇಶದ ಅಗತ್ಯವಿರುತ್ತದೆ.ಒಂದು ಮೆಗಾವಾಟ್ ಸಾಮರ್ಥ್ಯದ ಡೇಟಾ ಸೆಂಟರ್‌ಗೆ ವರ್ಷಕ್ಕೆ ಅಂದಾಜು 2.5 ಕೋಟಿ ಲೀಟರ್ ನೀರು ಬೇಕಾಗುತ್ತದೆ.
ನೀತಿ ಮರುಪರಿಶೀಲನೆಗೆ ಕಾರಣ:
ಎಐ ಮತ್ತು ಮೆಷಿನ್ ಲರ್ನಿಂಗ್‌ಗೆ ಡೇಟಾ ಸೆಂಟರ್‌ಗಳು ಅನಿವಾರ್ಯವಾಗಿದ್ದರೂ, ಅವುಗಳ ಬೃಹತ್ ಪ್ರಮಾಣದ ಸಂಪನ್ಮೂಲ ಬಳಕೆ ಕಳವಳಕಾರಿಯಾಗಿದೆ. ಈಗ ಶುದ್ಧೀಕರಿಸಿದ ನೀರನ್ನು ಮರುಬಳಕೆ ಮಾಡುವ ಹೊಸ ತಂತ್ರಜ್ಞಾನಗಳು ಲಭ್ಯವಿರುವುದರಿಂದ, ಪರಿಸರ ಸ್ನೇಹಿ ಕ್ರಮಗಳನ್ನು ಅಳವಡಿಸಿಕೊಳ್ಳಲು ಸರ್ಕಾರವು ತನ್ನ ಹಳೆಯ ನೀತಿಯನ್ನು ಬದಲಿಸಲು ಮುಂದಾಗಿದೆ.








