ಕಮಲಾಪುರ : ರಾಜ್ಯದಲ್ಲಿ ರೀಲ್ಸ್ ಹುಚ್ಚಿಗೆ ಮತ್ತೊಂದು ಬಲಿಯಾಗಿದ್ದು, ಟ್ರ್ಯಾಕ್ಟರ್ ಚಲಿಸುತ್ತಲೇ ರೀಲ್ಸ್ ಮಾಡುತ್ತಿದ್ದ ರೈತನೊಬ್ಬ ಅದೇ ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆ ಕಮಲಾಪುರ ನಿವಾಸಿ ಲೋಕೇಶ್ ಪೂಜಾರಿ (23) ಟ್ರ್ಯಾಕ್ಟರ್ ಡ್ರೈವರ್ ಆಗಿದ್ದ. ಟ್ರ್ಯಾಕ್ಟರ್ ಚಲಿಸುವಾಗಲೇ ಒಂದು ಕೈಯಲ್ಲಿ ಮೊಬೈಲ್ ಹಿಡಿದು ರೀಲ್ಸ್ ಮಾಡುತ್ತಾ ಇನ್ನೊಂದು ಕೈಯಲ್ಲಿ ಸ್ಟೇರಿಂಗ್ ಹಿಡಿದುಕೊಂಡಿದ್ದ. ಬುಧವಾರ ಇದೇ ರೀತಿ ರೀಲ್ಸ್ ಮಾಡುವ ಸಮಯದಲ್ಲಿ ಕಾಲು ಜಾರಿ ಟ್ರ್ಯಾಕ್ಟರ್ ಗಾಲಿ ಕೆಳಗೆ ಬಿದ್ದಿದ್ದು, ದೇಹದ ಮೇಲೆ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಪಕ್ಕದ ಹೊಲದಲ್ಲಿದ್ದ ರೈತರು ಚಾಲಕನಿಲ್ಲದೇ ಬರೀ ಟ್ರ್ಯಾಕ್ಟರ್ ಚಲಿಸುತ್ತಿರುವುದನ್ನು ಕಂಡು ಹತ್ತಿರ ಬಂದು ಪರಿಶೀಲಿಸಿದಾಗ ಡ್ರೈವರ್ ಕೆಳಗೆ ಮೃತಪಟ್ಟಿರುವ ಘಟನೆ ಗೊತ್ತಾಗಿದೆ. ತಕ್ಷಣ ರೈತರು ಪೊಲೀಸರಿಗೆ ಮಾಹಿತಿ ನೀಡಿದ್ದು, ಠಾಣೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.








