ಮೈಸೂರು : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದ್ದು, ಮೈಸೂರಿನಲ್ಲಿ ವಾಮಾಚಾರಕ್ಕೆ ವ್ಯಕ್ತಿಯೊಬ್ಬರನ್ನು ನರಬಲಿ ಕೊಟ್ಟಿರುವ ಶಂಕೆ ವ್ಯಕ್ತವಾಗಿದೆ.
ಮೈಸೂರು ಜಿಲ್ಲೆಯ ನಂಜನಗೂಡಿನ ಮಲ್ಕುಂಡಿ ಗ್ರಾಮದಲ್ಲಿ ವಾಮಾಚಾರ ನಡೆದಿದ್ದು, ಕತ್ತು ಕೊಯ್ದ ಸ್ಥಿತಿಯಲ್ಲಿ 43 ವರ್ಷದ ವ್ಯಕ್ತಿ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಸದಾಶಿವ ಎಂದು ಗುರುತಿಸಲಾಗಿದ್ದು, ವಾಮಾಚಾರಕ್ಕೆ ವ್ಯಕ್ತಿಯನ್ನು ನರಬಲಿ ಕೊಟ್ಟಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ.
ಕತ್ತು ಕೊಯ್ದ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳದಲ್ಲಿ ರಕ್ತ, ನಿಂಬೆಹಣ್ಣು, ಎಲೆ ಅಡಿಕೆ ಸೇರಿ ಮಾಟ ಮಂತ್ರಕ್ಕೆ ಬಳಸುವ ವಸ್ತುಗಳು ಪತ್ತೆಯಾಗಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.