ಸಿಕಂದರ್ ಬಾದ್ : ತೆಲಂಗಾಣದಲ್ಲಿ ಮತ್ತೊಂದು ಅಮಾನವೀಯ ಘಟನೆಯೊಂದು ನಡೆದಿದ್ದು, ಅಂತ್ಯಕ್ರಿಯೆಗೆ ಹಣವಿಲ್ಲದೇ ತಾಯಿಯ ಶವವನ್ನು ಇಬ್ಬರು ಯುವತಿಯರು ಮನೆಯಲ್ಲೇ ಇಟ್ಟುಕೊಂಡಿದ್ದ ಘಟನೆ ಬೆಳಕಿಗೆ ಬಂದಿದೆ.
ಹೌದು, ತೆಲಂಗಾಣದ ಸಿಕಂದರಾಬಾದ್‌ನಲ್ಲಿರುವ ಇಬ್ಬರು ಯುವತಿಯರು ತಮ್ಮ ಮನೆಯಲ್ಲಿ ತಮ್ಮ ತಾಯಿಯ ಶವದೊಂದಿಗೆ ನಾಲ್ಕು ದಿನಗಳನ್ನು ಕಳೆದಿದ್ದರು. ದುರ್ವಾಸನೆ ಬರುತ್ತಿದೆ ಎಂದು ನೆರೆಹೊರೆಯವರು ನೀಡಿದ ದೂರುಗಳ ನಂತರ ಪೊಲೀಸರು ಶುಕ್ರವಾರ (ಜನವರಿ 31) ಮನೆಗೆ ಪ್ರವೇಶಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಸಹೋದರಿಯರು ಮಾನಸಿಕವಾಗಿ ಅಸ್ವಸ್ಥರಾಗಿರುವಂತೆ ಕಂಡುಬರುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರನ್ನೂ ಪರೀಕ್ಷೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅವರನ್ನು ರಾವಲಿಕಾ (25) ಮತ್ತು ಅಶ್ವಿತಾ (22) ಎಂದು ಗುರುತಿಸಲಾಗಿದೆ. ಮೃತ ಮಹಿಳೆ ಶ್ರೀ ಲಲಿತಾ (45) ಅವರ ಕೊಳೆತ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ಪೊಲೀಸರು ಸ್ಥಳಾಂತರಿಸಿದ್ದಾರೆ. ಸಾವಿಗೆ ಕಾರಣ ತನಿಖೆಯಲ್ಲಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಹಿಳೆ ನಾಲ್ಕು ದಿನಗಳ ಹಿಂದೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.