ಬೆಳಗಾವಿ : ಬೆಳಗಾವಿ ಬಿಮ್ಸ್ ಆಸ್ಪತ್ರೆಯ ಮತ್ತೊಂದು ಕರ್ಮಕಂಡ ಬೆಳಕಿಗೆ ಬಂದಿದೆ. ಯುವತಿಯೊಬ್ಬಳು ನರ್ಸ್ ವೇಷ ಧರಿಸಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾಳೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಹೌದು, ಯುವತಿಯೊಬ್ಬಳು ನರ್ಸ್ ಗಳಂತೆ ವೇಷತೊಟ್ಟು ಬಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾಳೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮೂಲದ ಸನಾ ಶೇಖ್ ಎಂಬ ಯುವತಿ ಬಿಮ್ಸ್ ಆಸ್ಪತ್ರೆಯಲ್ಲಿ ನರ್ಸ್ ರಂತೆ ಚಿಕಿತ್ಸೆ ನೀಡುತ್ತಿದ್ದು, ಆಸ್ಪತ್ರೆ ವಿಭಾಗವೊಂದರ ಮುಖ್ಯಸ್ಥರ ಕುಮ್ಮಕ್ಕಿನಿಂದ ಯುವತಿ ಈ ರೀತಿ ಮಾಡುತ್ತಿದ್ದಾಳೆ ಎನ್ನಲಾಗಿದೆ.
ಪ್ರಶ್ನಿಸಿದಾಗ ತಾನು ತರಬೇತಿಗೆ ಬದಿದ್ದಾಗಿ ಹೇಳಿಕೊಳ್ಳುತ್ತಿದ್ದು, ಆದರೆ ತರಬೇತಿಗೆಂದು ಆಕೆಯನ್ನು ಬಿಮ್ಸ್ ಆಸ್ಪತ್ರೆಯಲ್ಲಿ ನೇಮಕ ಮಾಡಿಲ್ಲ ಎಂದು ತಿಳಿದುಬಂದಿದೆ. ಆಸ್ಪತ್ರೆ ಮುಖ್ಯಸ್ಥರೊಬ್ಬರು ಯುವತಿಯನ್ನು ಕರೆತಂದಿದ್ದು, ತಮಗೆ ಬೇಕಾದ ರೋಗಿಗಳನ್ನು ಇಲ್ಲಿಗೆ ಕರೆತಂದು ಚಿಕಿತ್ಸೆ ಕೊಡಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಸರ್ಜಿಕಲ್ ವಾರ್ಡ್, ಒಟಿಯಲ್ಲಿ ಯುವತಿ ಅಕ್ರಮವಾಗಿ ಚಿಕಿತ್ಸೆ ನೀಡುತ್ತಿದ್ದು, ಈ ಬಗ್ಗೆ ಬಿಮ್ಸ್ ನಿರ್ದೇಶಕರು ಹಾಗೂ ಸರ್ಜನ್ ಯುವತಿ ಸನಾಳ ವಿಚಾರಣೆ ನಡೆಸಿದ್ದಾರೆ.