ಬೆಂಗಳೂರು : ಮಹಿಳಾ ಸೆಲೆಬ್ರಿಟಿ ಕ್ರಿಕೆಟ್ ಟೂರ್ನಿ ವೇಳೆ ನಟಿಯೊಬ್ಬರ ಖಾಸಗಿ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್ ಮೇಲ್ ಮಾಡಿರುವ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ.
ಕೋರಮಂಗಲದ ಇಂದೋರ್ ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ ಮಹಿಳಾ ಸೆಲೆಬ್ರಿಟಿ ಕ್ರಿಕೆಟ್ ಟೂರ್ನಿ (WTC) ವೇಳೆ ನಟಿ ಹಾಗೂ ರಿಯಾಲಿಟಿ ಶೋವೊಂದರ ಸ್ಪರ್ಧಿಯಾಗಿರುವ ಸಂತ್ರಸ್ತೆ ಲೇಡಿಸ್ ವಾಶ್ ರೂಂಗೆ ಹೋದ ಸಂದರ್ಭದಲ್ಲಿ ಕಿಡಿಗೇಡಿಯೊಬ್ಬ ರಹಸ್ಯವಾಗಿ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್ ಮೇಲ್ ಮಾಡಿದ್ದಾನೆ.
ಕಿಡಿಗೇಡಿ ಚಿತ್ರೀಕರಿಸಿದ ವಿಡಿಯೋವನ್ನು ಮೊದಲು ನಟಿಯ ಸ್ನೇಹಿತೆಯ ಇನ್ಸ್ಟಾಗ್ರಾಮ್ ಖಾತೆಗೆ ಕಳುಹಿಸಿದ್ದು, ಬಳಿಕ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ನಮ್ಮ ಬಳಿ ಇಂತಹ ಹಲವು ವಿಡಿಯೋಗಳಿವೆ. ಹಣ ನೀಡದಿದ್ದರೆ ಈ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಘಟನೆ ಸಂಬಂಧ ಪೊಲೀಸರಿಗೆ ದೂರು
ಘಟನೆ ಸಂಬಂಧ ನಟಿ ಬೆಂಗಳೂರಿನ ಸೈಬರ್ ಕ್ರೈಂ (ಸಿಟಿ ಸೆನ್) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 77, 351 ಮತ್ತು 308 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಬಲೆ ಬೀಸಿದ್ದಾರೆ.








