ತುಮಕೂರು : ಕುಣಿಗಲ್ ನಲ್ಲಿರುವ ಮಾರ್ಕೋನಹಳ್ಳಿ ಜಲಾಶಯದ ಕೋಡಿ ದಂಡೆಯಲ್ಲಿ ನೀರಿನಲ್ಲಿ ಆಟವಾಗುತ್ತಿದ್ದ ಒಂದೇ ಕುಟುಂಬದ 6 ಮಂದಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಕುಣಿಗಲ್ ತಾಲೂಕಿನ ಮಾಗಡಿಪಾಳ್ಯದ ಸಾದಿಯಾ(28), ಅರ್ಬೀನ್ (20) ಮೃತದೇಹ ಪತ್ತೆಯಾಗಿದ್ದು, ಗಾಯಾಳು ನವಾಜ್ (32)ನನ್ನು ಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನೀರಿನಲ್ಲಿ ಕೊಚ್ಚಿ ಹೋಗಿರುವ ತಬಸಮ್ (46), ಶಬಾನ(44), ಮಹಿಬ್(1), ನಿಪ್ರಾ(4) ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಇವರೆಲ್ಲ ತುಮಕೂರಿನ ಬಿಜಿ ಪಾಳ್ಯದವರು ಎನ್ನಲಾಗಿದೆ.
ದಸರೆ ರಜೆ ಹಿನ್ನೆಲೆ ತುಮಕೂರು ಬಿ.ಜಿ.ಪಾಳ್ಯದ ತಬಸಮ್ ಕುಟುಂಬ ಸದಸ್ಯರೊಂದಿಗೆ ಕುಣಿಗಲ್ ತಾಲೂಕಿನ ಮಾಗಡಿಪಾಳ್ಯದ ಮಗಳು ಸಾಜಿಯಾ ಮನೆಗೆ ಬಂದಿದ್ದರು. ಬಳಿಕ ಅವರ ಮನೆಯಿಂದ ಮಾರ್ಕೊನಹಳ್ಳಿ ಡ್ಯಾಂಗೆ ತೆರಳಿದ್ದರು .
ವಿಷಯ ತಿಳಿದ ತಕ್ಷಣ ಅಮೃತೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ನೀರಿನಲ್ಲಿ ಕೊಚ್ಚಿ ಹೋದವರ ಪತ್ತೆಗೆ ಶೋಧ ಕಾರ್ಯ ನಡೆಸಿದರು. ಇಬ್ಬರ ಶವ ಸಿಕ್ಕಿದ್ದು ಇನ್ನೂ ನಾಲ್ಕು ಮಂದಿಗಾಗಿ ಶೋಧ ಕಾರ್ಯಾಚರಣೆ ನಡೆದಿದೆ.