ಚಿಕ್ಕಮಗಳೂರು : ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಕೃತ್ಯ ನಡೆದಿದ್ದು, ಆಸ್ತಿಗಾಗಿ ಸಾಕು ಮಗಳೇ ತಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಂಡಿಮಠದಲ್ಲಿ ಈ ಘಟನೆ ನಡೆದಿದ್ದು, ತಾಯಿ ಕುಸುಮ (62) ಕೊಲೆಯಾದ ದುರ್ದೈವಿ. ಮಗಳು ಸುಧಾ (34) ಕೊಲೆ ಮಾಡಿರುವ ಆರೋಪಿ. ಮಕ್ಕಳಿಲ್ಲದ ಕಾರಣ ತನ್ನ ತಂಗಿಯ ಮಗಳನ್ನೇ ದತ್ತು ಪಡೆದು ಸುಧಾಳನ್ನು ಮದುವೆ ಮಾಡಿಕೊಡಲಾಗಿತ್ತು.
ಆದರೆ ಮಗಳು ಸುಧಾ ತಾಯಿಯ ಮನೆ, ಆಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಪೀಡಿಸುತ್ತಿದ್ದಳು. ತಾಯಿ ಒಪ್ಪದಿದ್ದಾಗ ದಿಂಬಿನಿಂದ ಉಸಿರುಗಟ್ಟಿಸಿ ತಾಯಿಯನ್ನು ಕೊಲೆ ಮಾಡಿದ್ದಾಳೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.








