ರಾಯಚೂರು : ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ವ್ಯಕ್ತಿಯೋರ್ವ ಮಹಿಳೆಯ ವೇಷ ಧರಿಸಿ ನವಜಾತ ಶಿಶುವನ್ನು ಕದಿಯಲು ಬಂದು ಸಿಕ್ಕಿಬಿದ್ದ ಘಟನೆ ನಡೆದಿದೆ.
ರಾಯಚೂರಿನ ರಿಮ್ಸ್ ಆಸ್ಪತ್ರೆ ಬೆಳಗ್ಗಿನ ಜಾವ 2 ಗಂಟೆಯ ಸುಮಾರಿಗೆ ವ್ಯಕ್ತಿಯೋರ್ವ ಮಹಿಳೆಯ ವೇಷದಲ್ಲಿ ಶಿಶುವನ್ನು ಕದಿಯಲು ಬಂದು ಸಿಕ್ಕಿಬಿದ್ದಿದ್ದಾನೆ. ಆಸ್ಪತ್ರೆಯ ಸೆಕ್ಯುರಿಟಿಗಳು ಮಲಗಿರುವುದನ್ನು ಗಮನಿಸಿ ಸಿಬ್ಬಂದಿಯ ಕಣ್ಣು ತಪ್ಪಿಸಿ ನಾಲ್ಕನೇ ಮಹಡಿಯಲ್ಲಿರುವ ಬಾಣಂತಿಯರ ಕೊಠಡಿಗೆ ಮೂವರು ಆರೋಪಿಗಳು ಬಂದಿದ್ದು, ಈ ವೇಳೆ ಎಚ್ಚರಗೊಂಡ ಬಾಣಂತಿಯರ ಕುಟುಂಬಸ್ಥರು ಜೋರಾಗಿ ಕಿರುಚಿದ್ದಾರೆ.
ಬಾಣಂತಿಯರ ಕಿರುಚಾಟದ ಸದ್ದು ಕೇಳುತ್ತಿದ್ದಂತೆ ಎಚ್ಚರಗೊಂಡ ಜನರು ಕೂಡಲೇ ಆರೋಪಿಯನ್ನು ಹಿಡಿದಿದ್ದಾರೆ. ವ್ಯಕ್ತಿ ಸಿಕ್ಕಿ ಬೀಳುತ್ತಿದ್ದಂತೆ ಉಳಿದ ಇಬ್ಬರು ಪರಾರಿಯಾಗಿದ್ದಾರೆ. ಸದ್ಯ ಆರೋಪಿಗೆ ಥಳಿಸಿ ಸ್ಥಳೀಯ ಪೊಲೀಸರ ವಶಕ್ಕೆ ನೀಡಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.