ಥಾಣೆ : ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ್ನಲ್ಲಿ ಒಂದು ಕ್ರೂರ ಘಟನೆ ನಡೆದಿದೆ. ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮೇಲೆ ಯುವಕನೊಬ್ಬ ಹೊಟ್ಟೆಗೆ ಒದ್ದು, ಕೂದಲು ಹಿಡಿದು ಹಲ್ಲೆ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಈ ಕ್ರೂರ ಹಲ್ಲೆ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸಂಚಲನ ಸೃಷ್ಟಿಸುತ್ತಿದೆ. ಜುಲೈ 21 (ಸೋಮವಾರ) ಸಂಜೆ ನಡೆದ ಈ ದಾಳಿಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಯುವಕನನ್ನು ವಶಕ್ಕೆ ಪಡೆದರು.
ಕಲ್ಯಾಣ್ನ ನಂದಿವಲಿ ಪ್ರದೇಶದಲ್ಲಿ, ಡಾ. ಅನಿಕೇತ್ ಪಲಾಂಡೆ ಅವರಿಗೆ ಸೇರಿದ ಶ್ರೀ ಬಾಲಚಿಕಿತ್ಸಾಲಯ ಕ್ಲಿನಿಕ್ ಇದೆ. ಸೋನಾಲಿ ಕಲಾಸರೆ (25) ಎಂಬ ಯುವತಿ ಅದರಲ್ಲಿ ಕೆಲಸ ಮಾಡುತ್ತಿದ್ದಾರೆ. ಸೋಮವಾರ ಸಂಜೆ, ವೈದ್ಯರು ವೈದ್ಯಕೀಯ ಪ್ರತಿನಿಧಿಯೊಂದಿಗೆ ಸಭೆಯಲ್ಲಿದ್ದರು. ಅದೇ ಸಮಯದಲ್ಲಿ, ಸೋನಾಲಿ ರೋಗಿಯ ಸಂಬಂಧಿ ಗೋಕುಲ್ ಝಾ ಅವರನ್ನು ಸ್ವಲ್ಪ ಸಮಯ ಕಾಯುವಂತೆ ಕೇಳಿಕೊಂಡರು. ಇದರಿಂದ ಕುಪಿತನಾದ ಗೋಕುಲ್ ಝಾ, ಯುವತಿಯ ಮೇಲೆ ಹಲ್ಲೆ ನಡೆಸಿದ್ದಾನೆ.
ಸಿಸಿಟಿವಿ ದೃಶ್ಯಗಳಲ್ಲಿ ದಾಖಲಾಗಿರುವ ವೀಡಿಯೊದ ಪ್ರಕಾರ, ಗೋಕುಲ್ ಝಾ ಕೋಪದಿಂದ ಸೋನಾಲಿಯ ಹೊಟ್ಟೆಗೆ ಒದ್ದಿದ್ದಾನೆ. ನಂತರ ಆಕೆಯ ಕೂದಲನ್ನು ಹಿಡಿದು ಕೆಳಗೆ ಎಳೆದು ಮುಖಕ್ಕೆ ಹೊಡೆದಿದ್ದಾನೆ. ಅಲ್ಲೇ ಇದ್ದ ಇತರ ರೋಗಿಗಳ ಸಂಬಂಧಿಕರು ಮಧ್ಯಪ್ರವೇಶಿಸಿ ಯುವತಿಯನ್ನು ರಕ್ಷಿಸಿದರು. ದಾಳಿಯಲ್ಲಿ ಸೋನಾಲಿ ಗಂಭೀರವಾಗಿ ಗಾಯಗೊಂಡಿದ್ದಾಳೆ.
A receptionist girl beaten up by a Guy
in Kalyan MH
pic.twitter.com/ttjy3ZvggR— Ghar Ke Kalesh (@gharkekalesh) July 22, 2025
ಘಟನೆಯ ವೀಡಿಯೊ ವೈರಲ್ ಆದ ನಂತರ, ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ನಾಯಕರು ಸೇರಿದಂತೆ ಹಲವಾರು ರಾಜಕೀಯ ಪಕ್ಷಗಳ ಕಾರ್ಯಕರ್ತರು ಪ್ರತಿಭಟಿಸಿದರು. ಬಲಿಪಶುವಿನ ದೂರಿನ ಆಧಾರದ ಮೇಲೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಮಂಗಳವಾರ ರಾತ್ರಿ ಪೊಲೀಸರು ಎಚ್ಚೆತ್ತುಕೊಂಡು ಆರೋಪಿ ಗೋಕುಲ್ ಝಾನನ್ನು ಬಂಧಿಸಿದರು. ಗೋಕುಲ್ ಝಾ ಮೇಲೆ ಕ್ರಿಮಿನಲ್ ಹಿನ್ನೆಲೆ ಇದ್ದು, ಹಿಂದೆ ಹಲವಾರು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಈ ಪ್ರಕರಣದಲ್ಲಿ ಝಾ ಜೊತೆಗೆ, ಅವರ ಸಹೋದರ ಮತ್ತು ಇತರ ಇಬ್ಬರು ಮಹಿಳೆಯರನ್ನು ಸಹ ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ವರದಿಯಾಗಿದೆ.