ಬೆಂಗಳೂರು: ರಾಜ್ಯದಲ್ಲಿ ಕೋರಿಕೆಯ ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಸರ್ಕಾರ ಶಾಕ್ ನೀಡಿದೆ. ಪ್ರಸಕ್ತ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ಕರ್ತವ್ಯದಿಂದ ಬಿಡುಗಡೆಗೊಳಿಸದಂತೆ ಶಾಲಾ ಶಿಕ್ಷಣ ಇಲಾಖೆ ಖಡಕ್ ಆದೇಶ ಮಾಡಿದೆ. ಆದರೇ ಪರಸ್ಪರ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದವರಿಗೆ ಕೂಡಲೇ ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಆದೇಶದಲ್ಲಿ ತಿಳಿಸಿದೆ.
ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಅಧಿಕೃತ ಜ್ಞಾಪನ ಆದೇಶ ಹೊರಡಿಸಿದ್ದು, ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು [ಶಿಕ್ಷಕರ ವರ್ಗಾವಣೆ ನಿಯಂತ್ರಣ] ಅಧಿನಿಯಮ-2020 [2020ರ ಕರ್ನಾಟಕ ಅಧಿನಿಯಮ ಸಂಖ್ಯೆ :04] ಹಾಗೂ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು [ಶಿಕ್ಷಕರ ವರ್ಗಾವಣೆ ನಿಯಂತ್ರಣ] ನಿಯಮಗಳು-2020ರ ಹಾಗೂ ವರ್ಗಾವಣಾ ತಿದ್ದುಪಡಿ ಕಾಯ್ದೆ ಮತ್ತು ನಿಯಮಗಳು-2022ರ ಪ್ರಕಾರ ಶಾಲಾ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರನ್ನು ಒಳಗೊಂಡಂತೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ವೃಂದ ತತ್ಸಮಾನ ವೃಂದದ ಶಿಕ್ಷಕರು ಮತ್ತು ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರು/ತತ್ಸಮಾನ ವೃಂದ, ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ವಿಶೇಷ ಶಿಕ್ಷಕರು ಹಾಗೂ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕರು/ತತ್ಸಮಾನ ವೃಂದದ ಅಧಿಕಾರಿಗಳಿಗೆ ಸಾಮಾನ್ಯ ವರ್ಗಾವಣೆಯನ್ನು ಕೌನ್ಸಿಲಿಂಗ್ ಮೂಲಕ ಸ್ಥಳನಿಯುಕ್ತಿಗೊಳಿಸಲಾಗಿದೆ ಎಂದಿದ್ದಾರೆ.
ಪರಸ್ಪರ ವರ್ಗಾವಣೆಗೊಂಡ ಶಿಕ್ಷಕರನ್ನು ಶಿಕ್ಷಕರನ್ನು ತಕ್ಷಣ ಕರ್ತವ್ಯದಿಂದ ಬಿಡುಗಡೆಗೊಳಿಸುವುದು ಮತ್ತು ವರ್ಗಾವಣೆಯಾಗಿ ಬಂದ ಶಿಕ್ಷಕರನ್ನು ಕರ್ತವ್ಯಕ್ಕೆ ಹಾಜರುಪಡಿಸಿಕೊಳ್ಳೋದಕ್ಕೆ ಸೂಚಿಸಿದ್ದಾರೆ.
ಪರಸ್ಪರ ವರ್ಗಾವಣೆಗೊಂಡ ಶಿಕ್ಷಕರನ್ನು ಹೊರತುಪಡಿಸಿ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಮತ್ತು ಪರೀಕ್ಷೆಯಲ್ಲಿ ಫಲಿತಾಂಶವನ್ನು ಉತ್ತಮಗೊಳಿಸುವಿಕೆಯ ಉದ್ದೇಶದಿಂದ ಕೌನ್ಸಿಲಿಂಗ್ ಮೂಲಕ ಕೋರಿಕೆ ವರ್ಗಾವಣೆಯಾಗುವ ಎಲ್ಲಾ ಶಿಕ್ಷಕರನ್ನು ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ಅದೇ ಶಾಲೆಯ ಅದೇ ಹುದ್ದೆಯಲ್ಲಿ ಮುಂದುವರೆಸುವುದು ಹಾಗೂ ದಿನಾಂಕ: 09/04/2026 ರಂದು ಮೂಲ ಕರ್ತವ್ಯನಿರತ ಹುದ್ದೆ/ಶಾಲೆಯಿಂದ ಬಿಡುಗಡೆಗೊಳಿಸುವುದು ಮತ್ತು ಕೌನ್ಸಿಲಿಂಗ್ ಮೂಲಕ ವರ್ಗಾವಣೆಗೊಂಡ ಶಿಕ್ಷಕರುಗಳು ದಿನಾಂಕ: 10/04/2026 ರಂದು ವರ್ಗಾಯಿತ ಹುದ್ದೆಯ/ಶಾಲೆಯ ಕರ್ತವ್ಯದಲ್ಲಿ ಕಡ್ಡಾಯವಾಗಿ ಹಾಜರಾಗತಕ್ಕದ್ದು, ಈ ಕುರಿತು ಎಲ್ಲಾ ಸಕ್ಷಮ ವರ್ಗಾವಣಾ ಪ್ರಾಧಿಕಾರಿಗಳು ಅಗತ್ಯ ಕ್ರಮವಹಿಸಲು ತಿಳಿಸಿದ್ದಾರೆ.
-ವಸಂತ ಬಿ ಈಶ್ವರಗೆರೆ.., ಸಂಪಾದಕರು

/








