ಬೆಂಗಳೂರು: ಬೆಂಗಳೂರು ಅರಮನೆ ಆವರಣದಲ್ಲಿ ನಡೆಯುತ್ತಿರುವ ಮೂರು ದಿನಗಳ ಭಾರತೀಯ ಅಂತಾರಾಷ್ಟ್ರೀಯ ಕಾಫಿ ಹಬ್ಬ ದಲ್ಲಿ 7ಬೀನ್ ಟೀಮ್ ಅಭಿವೃದ್ಧಿಪಡಿಸಿರುವ ವೆಬ್‌ಸೈಟ್‌ನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಅನಾವರಣ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬ್ರೆಜಿಲ್ ಮತ್ತು ವಿಯೆಟ್ನಾಂಗಿಂತಲೂ ನಮ್ಮ ರಾಜ್ಯದ ಮಲೆನಾಡಿನ ಕಾಫಿ ಸೊಗಡು ಬೇರೆಯೇ ಇದೆ. ಇದನ್ನು ಸರಿಯಾದ ರೀತಿಯಲ್ಲಿ ಮಾರುಕಟ್ಟೆ ಮಾಡುವ ವ್ಯವಸ್ಥೆ ಸಂಘಟಿತವಾಗಿ ನಡೆಯಬೇಕಾಗಿದೆ ಎಂದರು.
ಕಾಫಿ ಕೃಷಿ ಮತ್ತು ಅದರ ಇಳುವರಿ ಉತ್ತಮಪಡಿಸುವ ನಿಟ್ಟಿನಲ್ಲಿ 7ಬೀನ್ ಟೀಮ್ ಮಾಡುತ್ತಿರುವ ಪ್ರಯತ್ನ ಶ್ಲಾಘನೀಯ. ಪ್ರಗತಿದಾಯಕ ಚಟುವಟಿಕೆಗಳ ಕಡೆಗೆ ಎಲ್ಲಾ ಬೆಳೆಗಾರರು ಗಮನ ನೀಡಿದರೆ ಗುರಿ ಸಾಧನೆ ಮಾಡಲು ಸಾಧ್ಯವಿದೆ ಎಂದರು.
ಪ್ರತಿ ವರ್ಷವೂ ಕಾಫಿ ಮೇಳವನ್ನು ನಡೆಸುವ ಮೂಲಕ ಕಾಫಿಯ ವಿಭಿನ್ನ ಬಳಕೆಯ ಬಗ್ಗೆ ಮತ್ತು ಉಪಕರಣಗಳ ಬಳಕೆಯ ಬಗ್ಗೆ ಮಾಹಿತಿ ಜ್ಞಾನವನ್ನು ನೀಡುವಂತಾದರೆ, ಅದು ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತಾರ ಮಾಡಲು ಸಾಧ್ಯವಾಗುತ್ತದೆ. ಕಾಫಿ ಬಳಕೆದಾರರ ಸಮೂಹವೂ ವೃದ್ಧಿಯಾಗಲಿದೆ ಎಂದು ತಗಡೂರು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಡಾ.ಎನ್.ಕೆ.ಪ್ರದೀಪ್, ಮಣ್ಣು ಪರೀಕ್ಷೆಯಿಂದ ಹಿಡಿದು, ಮಾರುಕಟ್ಟೆವರೆಗೆ ಹಲವು ಹಂತದಲ್ಲಿ ಬೆಳೆಗಾರರಿಗೆ ಗುಣಮಟ್ಟದ ಉತ್ಪಾದನೆಗೆ ಪ್ರಾತ್ಯಕ್ಷಿಕೆ ಮತ್ತು ತರಗತಿಯೊಂದಿಗೆ ವರ್ಷದಲ್ಲಿ 12 ತರಬೇತಿಯನ್ನು ತಿಂಗಳಿಗೆ ಒಂದರಂತೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಈ ತರಗತಿಯಲ್ಲಿ ಪಶ್ಚಿಮ ಘಟ್ಟವನ್ನು ಹಾನಿಯಾಗದ ರೀತಿಯಲ್ಲಿ ವಿಷಮುಕ್ತ ಕೃಷಿಯನ್ನು ಮಾಸುವ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುವುದರೊಂದಿಗೆ ನಮ್ಮ ದೇಶದಲ್ಲಿ ಸದ್ಯ 3.50 ಲಕ್ಷ ಟನ್ ಇಳುವರಿಇದ್ದು ಇದನ್ನು 2030 ಕ್ಕೆ 7 ಲಕ್ಷ ಟನ್‌ಗೆ ಹೆಚ್ಚಳ ಮಾಡವ ಗುರಿಯನ್ನು ಸಾಧಿಸಲು ಹಾಗೂ ಮುಂದಿನ ಪೀಳಿಗೆಯ ಯುವಕರನ್ನು ಪುನಃ ಲಾಭದಾಯಕ ಕೃಷಿಯತ್ತ ಸೆಳೆಯಲು ನಮ್ಮ ತಂಡ ಕೆಲಸ ಮಾಡುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ 7ಬೀನ್ ಟೀಮ್ ನ ಸಾಮಾಜಿಕ ಜಾಲತಾಣ www.7beanteam.in ಅನ್ನು ಅನಾವರಣ ಮಾಡಲಾಯಿತು. SCAI ನ ಛೇರ್ಮನ್ ಹಾಗೂ IICF ನ ಮುಖ್ಯಸ್ಥರು ಆದ ಡಿ.ಎಂ.ಪೂಣೇಶ್ ಮತ್ತು 7ಬೀನ್ ಟೀಮ್ ಛೇರ್ಮನ್ ಎಚ್.ಎಸ್.ಧರ್ಮರಾಜ್, ಉಪಾಧ್ಯಕ್ಷ ಯು.ಎಂ.ತೀರ್ಥಮಲ್ಲೇಶ್, ಕಾರ್ಯದರ್ಶಿ ಮುರುಳೀಧರ.ಎಸ್. ಬಕ್ಕರವಳ್ಳಿ, ಟ್ರಸ್ಟೀ ಗಳಾದ ಸಿ.ಎಸ್.ಮಹೇಶ್, ಹೆಚ್.ಹೆಚ್.ಉದಯ, ಎನ್.ಬಿ.ಉದಯಕುಮಾರ್, ಕೆ.ಎನ್.ಸುಬ್ರಹ್ಮಣ್ಯ ಮತ್ತಿತರರು ಹಾಜರಿದ್ದರು.
GOOD NEWS: ಇನ್ಮುಂದೆ ಉದ್ಯೋಗದಾತರ ಅನುಮತಿಯಿಲ್ಲದೇ ‘PF ಖಾತೆ’ ವರ್ಗಾವಣೆಗೆ ಅವಕಾಶ | EPFO Update