ಶಿವಮೊಗ್ಗ: ಜಾತಿ ಜನಗಣತಿಗೆ ಬರುವವರ ಬಳಿ ಸಮುದಾಯ ಬಾಂಧವರು ಜಾತಿ ಕಾಲಂನಲ್ಲಿ ದೀವರು, ಉಪ ಜಾತಿ ಕಾಲಂನಲ್ಲೂ ಸಹ ದೀವರು ಎಂದು ನಮೂದಿಸುವಂತೆ ನಾವು ದೀವರು ಅಭಿಯಾನದ ಸಂಚಾಲಕ ವೆಂಕಟೇಶ್ ಮೆಳವರಿಗೆ ಮನವಿ ಮಾಡಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಮಂಗಳವಾರ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ ದೀವರ ಜನಸಂಖ್ಯೆ 6ಲಕ್ಷಕ್ಕೂ ಅಧಿಕವಿದ್ದು ಗಣತಿದಾರರು ಬಂದಾಗ ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಮತ್ತು ಉಪಜಾತಿ ಕಾಲಂನಲ್ಲಿ ದೀವರು ಎಂದು ನಮೂದಿಸಿ ಎಂದು ತಿಳಿಸಿದರು.
ಈಡಿಗ ಎನ್ನುವುದು ಒಂದು ಒಕ್ಕೂಟವಾಗಿದ್ದು, ಇದರಲ್ಲಿ 26 ಪಂಗಡಗಳು ಸೇರಿವೆ. ಕೆಲವು ಕಡೆ ಜಾತಿ ವಿಭಾಗದಲ್ಲಿ ಈಡಿಗ ಎಂದು ಬರೆಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇದರಿಂದ ಸರ್ಕಾರದ ಅನೇಕ ಸೌಲಭ್ಯಗಳಿಂದ ನಾವು ವಂಚಿತರಾಗುವ ಸಾಧ್ಯತೆ ಇದೆ. ಹಿಂದಿನ ಕಾಂತರಾಜ ವರದಿ ಸಂದರ್ಭದಲ್ಲಿ ಸಹ ದೀವರ ಜನಸಂಖ್ಯೆಯನ್ನು ಕೇವಲ 65ಸಾವಿರ ಎಂದು ತೋರಿಸಲಾಗಿದೆ. ಅತ್ಯಂತ ಪ್ರಾಚೀನ ಸಂಸ್ಕೃತಿ, ಆಚಾರ, ವಿಚಾರ, ಆಹಾರ ಪದ್ದತಿಯೊಂದಿಗೆ ಬುಡಕಟ್ಟು ವಿಶೇಷತೆ ಹೊಂದಿರುವ ದೀವರ ಜಾತಿಯೇ ನೇಪಥ್ಯಕ್ಕೆ ಸರಿಯುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಸಮುದಾಯದ ಪ್ರಮುಖರು ಒಟ್ಟಾಗಿ ಚರ್ಚೆ ಮಾಡಿ ದೀವರ ಜಾತಿ ಎಂದು ನಮೂದಿಸುವ ನಿರ್ಣಯ ಕೈಗೊಳ್ಳಲಾಗಿದೆ. ಸಮಾಜದ ಗುರುಗಳು ಸಹ ಇದಕ್ಕೆ ಸಹಮತ ಸೂಚಿಸಿದ್ದಾರೆ. ಜಿಲ್ಲೆಯ ಸಚಿವರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಈ ಅಭಿಯಾನವನ್ನು ಬೆಂಬಲಿಸಬೇಕು. ಜಾತಿ ಮತ್ತು ಉಪಜಾತಿ ಕಾಲಂನಲ್ಲಿ ದೀವರು ಎಂದು ನಮೂದಿಸುವಂತೆ ಸಮುದಾಯ ಬಾಂಧವರಿಗೆ ಕರೆ ನೀಡಬೇಕು ಎಂದು ತಿಳಿಸಿದರು.
ಸಮಾಜದ ಪ್ರಮುಖರಾದ ಶಿವಾನಂದ ಕುಗ್ವೆ ಮಾತನಾಡಿ, ಸಾಮಾಜಿಕ, ಶೈಕ್ಷಣಿಕ, ಐತಿಹಾಸಿಕವಾದ ಹಿನ್ನೆಲೆ ದೀವರ ಸಮಾಜಕ್ಕೆ ಇದೆ. ನಮ್ಮದೇ ಆದ ವಿಶೇಷ ಭಾಷೆಯನ್ನು ನಾವು ಹೊಂದಿದ್ದೇವೆ. ದೀವರ ಜಾತಿ ಕುರಿತು ಅನೇಕ ಶಾಸನಗಳು ಇದ್ದು, ಸಾಕಷ್ಟು ಕೃತಿಗಳು ಬೇರೆಬೇರೆ ಲೇಖಕರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಾರೆ. ಹಳೇಪೈಕ, ದೀವರು ಎಂಬಿತ್ಯಾದಿ ದಾಖಲೆಗಳು ಹಳೇಯ ಶೈಕ್ಷಣಿಕ ದಾಖಲೆಗಳಲ್ಲಿ ಲಭ್ಯವಿದೆ. ಕಾಗೋಡು ಚಳುವಳಿ ಸೇರಿದಂತೆ ಕೆಳದಿ ಸಾಮ್ರಾಜ್ಯದ ಕಾಲದಲ್ಲಿ ದೀವರು ಪ್ರಮುಖ ಪಾತ್ರ ವಹಿಸಿದ್ದು ಕಂಡು ಬರುತ್ತದೆ. ಬದಲಾದ ದಿನಮಾನಗಳಲ್ಲಿ ದೀವರ ಜಾತಿ ಬೇರೆಬೇರೆ ಸ್ಥಿತ್ಯಂತರಗಳ ನಡುವೆ ಕೊಚ್ಚಿಹೋಗುವ ಸಾಧ್ಯತೆ ಇದ್ದು, ಇದನ್ನು ಉಳಿಸಿಕೊಳ್ಳಲು ನಾವು ಗಣತಿ ಸಂದರ್ಭದಲ್ಲಿ ದೀವರು ಎಂದು ನಮೂದಿಸುವ ಮೂಲಕ ಪ್ರಯತ್ನಿಸಬೇಕು ಎಂದರು.
ಪ್ರಭಾವತಿ ಚಂದ್ರಕಾಂತ್, ಈಶ್ವರನಾಯಕ ಕುಗ್ವೆ ಮಾತನಾಡಿದರು. ಗೋಷ್ಟಿಯಲ್ಲಿ ಡಿ.ಗಣಪತಪ್ಪ, ರವಿಕುಮಾರ್ ವೈ.ಕೆ., ದೇವರಾಜ್, ಸುಮಿತ್ರ ಮಹಾಬಲೇಶ್ವರ, ಲಕ್ಷ್ಮಿ ಗಣಪತಿ, ಉಷಾ, ಸಂದೀಪ್ ಕೆಳದಿ ಇನ್ನಿತರರು ಉಪಸ್ಥಿತರಿದ್ದರು.
ಶಿವಮೊಗ್ಗ: ಆಧುನಿಕ ತಂತ್ರಜ್ಞಾನದ ಮೂಲಕ ಕೃಷಿಯಲ್ಲಿ ಪ್ರಗತಿಗೆ ಶ್ರಮಿಸಿ- ಶಾಸಕ ಗೋಪಾಲಕೃಷ್ಣ ಬೇಳೂರು