ಶಿವಮೊಗ್ಗ : ಫೆಬ್ರವರಿ 3ರಿಂದ ನಡೆಯಲಿರುವ ಮಾರಿಕಾಂಬಾ ದೇವಿಯ ಜಾತ್ರೆಯ ಆರಂಭಿಕ ಹಂತವಾದ ಮರ ಕಡಿಯುವ ಶಾಸ್ತ್ರ ಮಂಗಳವರ ವಿದ್ಯುಕ್ತವಾಗಿ ನಡೆಯಿತು. ಉಪ್ಪಾರ ಕೇರಿಯ ಚಿಕ್ಕಮ್ಮನ ಮನೆಯಲ್ಲಿ ಪೋತರಾಜನಿಗೆ ವಿಶೇಷ ಪೂಜೆ ಸಲ್ಲಿಸಿ, ಅರಿಶಿನ ಶಾಸ್ತ್ರ ಮುಗಿಸಿ ಅಲ್ಲಿಂದ ಮಾರಿಕಾಂಬಾ ದೇವಸ್ಥಾನಕ್ಕೆ ಕರೆದು ಕೊಂಡು ಬರಲಾಯಿತು.
ಶಿವಮೊಗ್ಗ ಜಿಲ್ಲೆಯ ಸಾಗರದ ಮಾರಿಕಾಂಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪೋತರಾಜ ಮರ ಹುಡುಕುವ ಕಾರ್ಯಕ್ಕೆ ಮುಂದಾದನು. ಅತ್ಯಂತ ಆವೇಶಭರಿತನಾಗಿ ಚಾಟಿಸೇವೆ ಮೂಲಕ ಪೋತರಾಜ ಮರ ಹುಡುಕಲು ಪ್ರಾರಂಭ ಮಾಡಿದನು. ಸಾಗರ ಹೋಟೆಲ್ ಸರ್ಕಲ್ ಮೂಲಕ ಮರ ಹುಡುಕುತ್ತಾ ಹೊರಟ ಪೋತರಾಜನ ಹಿಂದೆ ಸಾವಿರಾರು ಭಕ್ತರು ಹಿಂಬಾಲಿಸಿದರು. ನಂತರ ಜೋಗ ರಸ್ತೆಯ ರಾಮ ದೇವಸ್ಥಾನದ ಸಮೀಪ ಹಲಸಿನ ಮರ ಗುರುತಿಸಿದ ಪೋತರಾಜ ಚಾಟಿಯಿಂದ ಹೊಡೆಯುವ ಮೂಲಕ ಮರ ಕಡಿಯುವ ಶಾಸ್ತ್ರವನ್ನು ಮುಗಿಸಿದರು.
ಇದಕ್ಕೂ ಮೊದಲು ಉಪ್ಪಾರ ಕೇರಿಯಲ್ಲಿರುವ ಪೋತರಾಜನ ಮನೆಯಲ್ಲಿ ಮರ ಕಡಿಯುವ ಶಾಸ್ತ ಕಾರ್ಯಕ್ರಮದ ಧಾರ್ಮಿಕ ವಿಧಿವಿಧಾನ ನಡೆಯಿತು. ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಗೋಪಾಲಕೃಷ್ಣ ಬೇಳೂರು, ಮಾಜಿ ಸಚಿವ ಹರತಾಳು ಹಾಲಪ್ಪ ಸೇರಿ ಅನೇಕ ಗಣ್ಯರು ಪಾಲ್ಗೊಂಡಿದ್ದರು.
ಸಾಗರದ ಜೋಗ ರಸ್ತೆಯಲ್ಲಿ ಪೋತರಾಜ ಗುರುತಿಸಿದ ಮರಕ್ಕೆ ಮಾರಿಕಾಂಬ ಸಮಿತಿಯ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಪೋತರಾಜ ಗುರುತಿಸಿದ ಮರದ ರೆಂಬೆಯನ್ನು ಕತ್ತರಿಸಿ ದೇವಸ್ಥಾನಕ್ಕೆ ತರಲಾಯಿತು.








