ಶಿವಮೊಗ್ಗ : ಕುಗ್ರಾಮದಲ್ಲಿರುವ ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸಿ ಅವರ ಶಿಕ್ಷಣಕ್ಕೆ ಸಹಕಾರಿಯಾಗಿ ನಿಂತಿರುವ ಸಾಗರದ ನಮ್ಮನೆ ಗ್ರಾಮೀಣ ಮಕ್ಕಳ ಅನಾಥಾಶ್ರಮ ಕಾರ್ಯ ಅಭಿನಂದಾರ್ಹವಾದದ್ದು ಎಂದು ಲಯನ್ಸ್ ಅಧ್ಯಕ್ಷ ಡಾ. ಪ್ರಸನ್ನ ಟಿ ಎಂದು ಹೇಳಿದರು.
ಮಂಗಳವಾರದಂದು ಶಿವಮೊಗ್ಗದ ಸಾಗರದ ಶಿರವಾಳದಲ್ಲಿರುವ ನಮ್ಮನೆ ಗ್ರಾಮೀಣ ಮಕ್ಕಳ ಅನಾಥಾಶ್ರಮಕ್ಕೆ ಲಯನ್ಸ್ ಸಂಸ್ಥೆ ವತಿಯಿಂದ ಉಚಿತ ಬ್ಲಾಂಕೇಟ್ ವಿತರಣೆ ಮಾಡಿ ಮಾತನಾಡಿದಂತ ಅವರು, ಲಯನ್ಸ್ ಕ್ಲಬ್ ಸಾಗರವನ್ನು ಕೇಂದ್ರವಾಗಿ ಇರಿಸಿಕೊಂಡು ವಿವಿಧ ಅಭಿವೃದ್ದಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಮಕ್ಕಳಿಗೆ ಎಲ್ಲ ರೀತಿಯ ಮೂಲಸೌಲಭ್ಯ ಇದ್ದಾಗ ಮಾತ್ರ ಅವರು ಏಕಾಗ್ರತೆಯಿಂದ ಶಿಕ್ಷಣದಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಲಯನ್ಸ್ ಕ್ಲಬ್ ಶೈಕ್ಷಣಿಕ ಪರಿಕರ ಪೂರೈಕೆ ಮಾಡುವ ಜೊತೆಗೆ ಚಳಿಯಿಂದ ಮಕ್ಕಳು ಸುರಕ್ಷತೆಯನ್ನು ಕಾಯ್ದುಕೊಳ್ಳಲು ಬ್ಲಾಂಕೇಟ್ ನೀಡುತ್ತಿದೆ. ಅನಾಥಾಶ್ರಮದ ಮಕ್ಕಳಿಗೆ ಮಾತ್ರವಲ್ಲದೆ ಬೇರೆಬೇರೆಯವರಿಗೆ ಸಹ ಬ್ಲಾಂಕೇಟ್ ವಿತರಣೆ ಮಾಡಿದೆ. ಶಿವಮೊಗ್ಗ ಶ್ರೀರಾಮ ರೆಸಿಡೆನ್ಸಿಯ ಜನಾರ್ದನ್ ಮಕ್ಕಳಿಗೆ ಬ್ಲಾಂಕೆಟ್ ಕೊಡುಗೆಯಾಗಿ ನೀಡಿದ್ದಾರೆ ಎಂದರು.
ಆಶ್ರಮದ ಸಂಸ್ಥಾಪಕ ಸಂತೋಷ್ ಲಿಂಗನಮಕ್ಕಿ ಮಾತನಾಡಿ ನಮ್ಮನೆ ಆಶ್ರಮ ಕುಗ್ರಾಮದ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಪೂರಕವಾದ ವಾತಾವರಣ ರೂಪಿಸುತ್ತಿದೆ. ದಟ್ಟಕಾಡಿನ ನಡುವೆ ಮಕ್ಕಳು ನಾಲ್ಕಾರು ಕಿ.ಮೀ. ನಡೆದುಕೊಂಡು ಶಾಲೆಗೆ ಹೋಗುತ್ತಿರುವುದನ್ನು ಗಮನಿಸಿ ಅವರನ್ನು ಇಲ್ಲಿಗೆ ಕರೆದುಕೊಂಡು ಬಂದು ವಸತಿ ಊಟದ ವ್ಯವಸ್ಥೆ ಕಲ್ಪಿಸಿ ಶಿಕ್ಷಣ ಸೌಲಭ್ಯ ನೀಡುತ್ತಿದೆ. 2022ರಿಂದ ಆಶ್ರಮ ನಡೆಸುತ್ತಿದ್ದು, ಮೂರು ವರ್ಷ ಲಿಂಗನಮಕ್ಕಿಯಲ್ಲಿ ಆಶ್ರಮ ನಡೆಸಲಾಗಿತ್ತು. ನಂತರ ಸಾಗರ ಸಮೀಪದ ಶಿರವಾಳಕ್ಕೆ ಆಶ್ರಮ ಸ್ಥಳಾಂತರಿಸಲಾಗಿದೆ. ಆಶ್ರಮದ ಅಭಿವೃದ್ದಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಸಾಗರದ ಲಯನ್ಸ್ ಸಂಸ್ಥೆಯ ಶಿವಬಸಪ್ಪ, ಅರ್ಚನಾ, ಮಾನಸ, ರಾಜೇಶ್ವರಿ, ಮಾನಸ ಇನ್ನಿತರರು ಉಪಸ್ಥಿತರಿದ್ದರು.








