ಶಿವಮೊಗ್ಗ: ರಾಜ್ಯ ಸರ್ಕಾರವು ಸೊರಬ ತಾಲ್ಲೂಕಿನ ಉಳವಿಯಲ್ಲಿರುವಂತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರೌಢ ಶಾಲೆಯನ್ನು ಸೇರಿಸಿ ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಉನ್ನತೀಕರಿಸಿ ಆದೇಶಿಸಿದೆ.
ಈ ಸಂಬಂಧ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಿದ್ದು, ಕರ್ನಾಟಕದಲ್ಲಿ ಸುಮಾರು 47,493 ಸರ್ಕಾರಿ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿವೆ. ಇವುಗಳಲ್ಲಿ 19,603 ಪ್ರಾಥಮಿಕ ಶಾಲೆಗಳು, 21,676 ಹಿರಿಯ ಪ್ರಾಥಮಿಕ ಶಾಲೆಗಳು, 4,895 ಪ್ರೌಢ ಶಾಲೆಗಳು ಮತ್ತು 1,319 ಪದವಿ ಪೂರ್ವ ಶಾಲೆಗಳಿರುತ್ತವೆ ಎಂದು ತಿಳಿಸಿದೆ.
ಕರ್ನಾಟಕ ಪಬ್ಲಿಕ್ ಶಾಲೆಗಳು ಗುಣಮಟ್ಟದ ಸಾರ್ವಜನಿಕ ಶಿಕ್ಷಣಕ್ಕಾಗಿ ಒಂದು ಅಭೂತಪೂರ್ವ ಬದಲಾವಣೆಯ ಚೌಕಟ್ಟನ್ನು ಒದಗಿಸುತ್ತವೆ. ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳ ಗುಣಮಟ್ಟದ ಕಲಿಕೆ ಮತ್ತು ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳಕ್ಕೆ ಆರಂಭಿಸಿದ ಒಂದು ಸುಧಾರಣಾತ್ಮಕ ಕಾರ್ಯತಂತ್ರವೇ ಕೆಪಿಎಸ್ ಆಗಿದೆ ಎಂದು ಹೇಳಿದ್ದಾರೆ.
ಕೆಪಿಎಸ್ ಮಾದರಿಯ ಶಾಲೆಗಳು ಒಂದೇ ಸೂರಿನಡಿಯಲ್ಲಿ ಶಾಲಾ ಪೂರ್ವ ತರಗತಿಗಳಿಂದ ಅಂದರೇ LKGಯಿಂದ 12ನೇ ತರಗತಿಯವರೆಗೆ ಅಂದರೆ ದ್ವಿತೀಯ ಪಿಯುಸಿವರೆಗೆ ಶಿಕ್ಷಣವನ್ನು ಒದಗಿಸುತ್ತದೆ. ಇದು ಕಲಿಕೆಯ ಗುಣಮಟ್ಟವನ್ನು ಉತ್ತಮಪಡಿಸಲು ಉತ್ತೇಜಿಸುತ್ತದೆ. ಅಲ್ಲದೇ ಪ್ರಾಥಮಿಕ, ಮಾಧ್ಯಮಿಕ ಮತ್ತು ಪಿಯುಸಿ ಹಂತಗಳಲ್ಲಿ ದಾಖಲಾತಿ ಹಂತದಲ್ಲಿ ಸೋರುವಿಕೆ, ಶಾಲೆ ಬಿಡುವಿಕೆಯ ದರವನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ಉಳವಿಯ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಒಳಗೊಂಡು ಉಳವಿ ಸುತ್ತಮುತ್ತಲ 5 ಕಿಲೋಮೀಟರ್ ವ್ಯಾಪ್ತಿಯ ಎಲ್ಲಾ ಶಾಲೆಗಳನ್ನು ಒಳಗೊಂಡು ಕರ್ನಾಟಕ ಪಬ್ಲಿಕ್ ಶಾಲೆಯನ್ನಾಗಿ ಉನ್ನತೀಕರಿಸಲು ಸರ್ಕಾರದ ಅಧಿಕೃತ ಆದೇಶ ಮಾಡಿದೆ. ಅಲ್ಲದೇ ಹೆಚ್ಚುವರಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅನುದಾನವನ್ನು ಬಿಡುಗಡೆ ಮಾಡಿದೆ.
ಉಳವಿಯ ಶಾಲೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಉತನ್ನತೀಕರಿಸಿದ್ದಕ್ಕಾಗಿ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರು, ಉಳವಿಯ ಗ್ರಾಮಸ್ಥರು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಗೆ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಉಳವಿಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಆರಂಭವಾಗುತ್ತಿರುವುದಕ್ಕೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ಸಾಗರದ ‘ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನ’ದ ಹಾಲಿ ಸಮಿತಿ ವಿರುದ್ಧ ‘ನ್ಯಾಯಾಂಗ ನಿಂದನೆ’ ಅರ್ಜಿ