ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಾಳೆ ಶಾಸಕ ಗೋಪಾಲಕೃಷ್ಣ ಬೇಳೂರು ಜನಸಂಪರ್ಕ ಸಭೆಯನ್ನು ನಡೆಸಲಿದ್ದಾರೆ. ಈ ಸಭೆಯಲ್ಲಿ ಎಲ್ಲಾ ಹಂತದ ಅಧಿಕಾರಿಗಳು ಹಾಜರಿರಲಿದ್ದು, ಜನರ ಸಮಸ್ಯೆಯನ್ನು ಸ್ಥಳದಲ್ಲೇ ಪರಿಹರಿಸುವಂತ ಕೆಲಸವನ್ನು ಮಾಡಲಾಗುತ್ತಿದೆ. ಹೀಗಾಗಿ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಂಡು, ತಮ್ಮ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳಲು ಮನವಿ ಮಾಡಿದ್ದಾರೆ.
ನಾಳೆ ಕಲ್ಮನೆಯಲ್ಲಿ ಶಾಸಕರಿಂದ ಜನಸಂಪರ್ಕ ಸಭೆ
ಇಂದು ಸಾಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯದ ಬಗ್ಗೆ ಶಾಸಕ ಗೋಪಾಲಕೃಷ್ಣ ಬೇಳೂರು ಮಾಹಿತಿ ನೀಡಿದರು. ಈ ಹಿಂದೆ ಹೋಬಳಿ ಮಟ್ಟದಲ್ಲಿ ಶಾಸಕನಾಗಿ ಜನಸಂಪರ್ಕ ಸಭೆಯನ್ನು ನಡೆಸಿದ್ದೆ. ಇದೀಗ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಇದೇ ಮೊದಲ ಬಾರಿಗೆ ಕಲ್ಮನೆಯಲ್ಲಿ ಜನಸಂಪರ್ಕ ಸಭೆ ನಡೆಸಲಾಗುತ್ತಿದೆ. ಜನರ ಬಳಿಗೆ ಸರ್ಕಾರವನ್ನು ಕೊಂಡೊಯ್ಯುವಂತ ಕೆಲಸವನ್ನು ಮಾಡಿ, ಸಮಸ್ಯೆ ಇತ್ಯರ್ಥ ಪಡಿಸುವಂತ ಕೆಲಸ ಮಾಡಲಾಗುತ್ತಿದೆ ಎಂಬುದಾಗಿ ಹೇಳಿದರು.
ನಾಳೆಯ ಜನಸಂಪರ್ಕ ಸಭೆಯಲ್ಲಿ ರೈತರ 94ಸಿ, ಪೋಡಿ, ಬಗರ್‌ಹುಕುಂ ಸೇರಿದಂತೆ ವಿವಿಧ ಭೂಸಮಸ್ಯೆ ಕುರಿತು ಅಹವಾಲು ಸ್ವೀಕರಿಸಿ ಸ್ಥಳದಲ್ಲಿಯೆ ಪರಿಹಾರ ಕಲ್ಪಿಸುವ ಉದ್ದೇಶ ಹೊಂದಿದೆ. ಕಂದಾಯ ಸಚಿವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸಹಕಾರ ನೀಡುವುದು ನಮ್ಮ ಕರ್ತವ್ಯವಾಗಿದೆ ಎಂದರು.
ನವೆಂಬರ್.18ರಂದು ಸಹಕಾರ ಸಪ್ತಾಹ ಆಚರಣೆ
ಸಾಗರದ ಶಂಕರಮಠದಲ್ಲಿ ನವೆಂಬರ್.18ರಂದು ಸಹಕಾರ ಸಪ್ತಾಹವನ್ನು ಆಚರಿಸಲಾಗುತ್ತದೆ. ಆರ್.ಎಂ.ಮಂಜುನಾಥ ಗೌಡ, ವಿದ್ಯಾಧರ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. ಇಂದಿನ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಜಿಲ್ಲಾ ಸಹಕಾರ ಯ್ಯೂನಿಯನ್ ಗೆ ಇಬ್ಬರು ಆಯ್ಕೆ
ಸಾಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಿಭಾಗದಿಂದ ಅಮೃತೇಶ್ ಹೆಗ್ಗೋಡು ಇವರು ಆಯ್ಕೆಯಾಗಿದ್ದಾರೆ. ಸಾಗರ ಉಪ ವಿಭಾಗದ ಸಾಗರ, ಸೊರಬ, ಶಿಕಾರಿಪುರ ಮತ್ತು ಹೊಸನಗರ ಈ ನಾಲ್ಕು ತಾಲ್ಲೂಕಿನಿಂದ ಮಾರ್ಕೇಟಿಂಗ್ ವಿಭಾಗದಿಂದ ಅಕ್ಷಯ ಸಾಗರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದಂತ ದಿನೇಶ್ ಬರದವಳ್ಳಿ ಅವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂಬುದಾಗಿ ತಿಳಿದರು.
ಕೆಪಿಸಿ ಭೂಮಿ ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಪ್ರಸ್ತಾಪವಾಗಿಲ್ಲ
ಕೆಪಿಸಿ ಭೂಮಿ ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಯಾವುದೇ ಪ್ರಸ್ತಾಪವಾಗಿಲ್ಲ. ಪರಿಸರ ಹೋರಾಟಗಾರ ಅನಂತ ಹೆಗಡೆ ಅಶೀಸರ ಅವರದ್ದು ವೈಯಕ್ತಿಕ ಹೇಳಿಕೆ ಮಾತ್ರ. ನಾಡಿಗೆ ವಿದ್ಯುತ್ ನೀಡಲು ಸರ್ವಸ್ವ ಕಳೆದುಕೊಂಡ ರೈತರ ಬಗ್ಗೆ ಆಶೀಸರ ಗಮನ ಹರಿಸಬೇಕು. ಮುಳುಗಡೆಯಿಂದ ನೊಂದಿದ್ದಾರೆ. ಅವರ ಸಾಗುವಳಿ ಮಾಡುತ್ತಿರುವ ಕೆಪಿಸಿ ಭೂಮಿಯನ್ನು ಅರಣ್ಯ ಇಲಾಖೆ ಸ್ವಾಧೀನ ಪಡೆಯಲಿ ಎನ್ನುವ ಹೇಳಿಕೆಯೆ ಅವೈಜ್ಞಾನಿಕವಾಗಿದೆ ಎಂದು ಹೇಳಿದರು.
ಕೆಪಿಸಿ ಭೂಮಿ ಅರಣ್ಯ ಇಲಾಖೆಗೆ ಏಕೆ ಹಸ್ತಾಂತರಿಸಬೇಕು. ಮುಳುಗಡೆ ಆದವರ ನೋವು ಅರ್ಥ ಮಾಡಿಕೊಳ್ಳಲಿ. ಕೆಲವರು ಕೆಪಿಸಿ ಭೂಮಿ ನಿಮ್ಮ ಹೆಸರಿಗೆ ಮಾಡಿಸುತ್ತೇವೆ ಎಂದು ಕೆಲವರು ಹಣ ಎತ್ತುವಳಿ ಮಾಡುತ್ತಿದ್ದಾರೆ. ಇಂತಹ ಹೇಳಿಕೆ ನೀಡುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕು. ರೈತರು ಹೆದರಿಕೊಳ್ಳುವ ಅಗತ್ಯವಿಲ್ಲ. ನಿಮ್ಮ ಪರ ನಾನಿದ್ದೇನೆ. ಕೆಪಿಸಿ ಭೂಮಿ ಅರಣ್ಯ ಇಲಾಖೆ ವಶಪಡಿಸಿಕೊಳ್ಳಲು ಸರ್ಕಾರಕ್ಕೆ ಬಿಡುವುದಿಲ್ಲ ಎಂದರು.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಬಗ್ಗೆ ಶಾಸಕರು ಹೇಳಿದ್ದೇನು ಗೊತ್ತಾ?
ಪಂಪ್ಡ್ ಸ್ಟೋರೇಜ್ ನಮ್ಮ ಆಸಕ್ತಿಯ ವಿಷಯವಲ್ಲ. ನಾನು ಹಿಂದೆಯೆ ಹೇಳಿದ್ದೇನೆ. ಕೇಂದ್ರ ಸರ್ಕಾರ ಯೋಜನೆ ನಿಲ್ಲಿಸುವುದಾದರೆ ನಿಲ್ಲಿಸಲಿ, ನಮ್ಮ ಅಭ್ಯಂತರವಿಲ್ಲ. ದೊಡ್ಡ ಯೋಜನೆ ಮಾಡುವಾಗ ಸಣ್ಣಪುಟ್ಟ ಪರಿಸರನಾಶವಾಗುತ್ತದೆ. ಕೆಲವರು ಬೇಕು ಎನ್ನುತ್ತಾರೆ. ಕೆಲವರು ಬೇಡ ಎನ್ನುತ್ತಾರೆ. ಯೋಜನೆ ಆಗಲೇಬೇಕು ಎಂದು ತಡೆಹಿಡಿದಿಲ್ಲ, ಹೋರಾಟಗಾರರಿಗೆ ತೊಂದರೆ ಕೊಟ್ಟಿಲ್ಲ. ಜಮೀನು ಕಳೆದುಕೊಳ್ಳುವವರಿಗೆ ತೊಂದರೆ ಆಗಬಾರದು, ಅವರಿಗೆ ರಕ್ಷಣೆ ಕೊಡಬೇಕು ಎಂದು ನಾನು ಪ್ರಯತ್ನಿಸಿದ್ದು ನಿಜ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ನಲ್ಲೇ ಹಣ ಠೇವಣಿ ಇರಿಸಿ
ಸಾರ್ವಜನಿಕರು ಡಿಸಿಸಿ ಬ್ಯಾಂಕ್‌ನಲ್ಲಿ ಹಣ ಠೇವಣಿ ಇಡಬೇಕು. ಖಾಸಗಿ ಬ್ಯಾಂಕ್‌ಗಳಿಗೆ ಬಡ್ಡಿ ಆಸೆಗೆ ಹಣ ತೊಡಗಿಸಿದರೆ ಹಣ ಕಳೆದುಕೊಳ್ಳಬೇಕಾಗುತ್ತದೆ. ಸಾಗರ ಹೊಸನಗರದವರು ಬೆಂಗಳೂರಿನ ಗುರು ರಾಘವೇಂದ್ರ ಬ್ಯಾಂಕ್ ನಲ್ಲಿ ಹಣ ತೊಡಗಿಸಿದ್ದರು ಎನ್ನಲಾಗುತ್ತಿದೆ. ಹಣ ವಾಪಾಸ್ ಸಿಗುವ ಕಡೆ ಹಣ ಇರಿಸಿ. ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಉತ್ತಮವಾಗಿ ನಡೆಯುತ್ತಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ವ್ಯವಸ್ಥಾಪಕರ ಸಭೆ ನಡೆಸಿ ಬ್ಯಾಂಕ್ ಪಾರದರ್ಶಕವಾಗಿ ಸಾಗಲು ಚರ್ಚೆ ನಡೆಸಲಾಗುತ್ತಿದೆ. ಕಲ್ಮನೆ ಸೊಸೈಟಿಯಲ್ಲಿ ಅವ್ಯವಹಾರ ನಡೆದ ನಂತರ ನಾವು ಹೆಚ್ಚು ಜಾಗೃತರಾಗಿದ್ದೇವೆ ಎಂಬುದಾಗಿ ತಿಳಿಸಿದರು.
ದೆಹಲಿ ಕಾರು ಬಾಂಬ್ ಸ್ಪೋಟದ ಆರೋಪಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ನೀಡಿ
ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಕಾರು ಬಾಂಬ್ ಸ್ಪೋಟ ಘಟನೆ ಖೇದಕರವಾಗಿದೆ. ಕೇಂದ್ರ ಸರ್ಕಾರ ಸೂಕ್ತ ರೀತಿಯಲ್ಲಿ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಬೇಕು. ಮುಂದೆ ಈ ರೀತಿಯ ಘಟನೆಗಳು ಮರುಕಳಿಸದಂತೆ ಕ್ರಮವಹಿಸಬೇಕು. ಕಾರು ಸ್ಪೋಟಿಸಿದಂತ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಯನ್ನು ನೀಡಬೇಕು ಎಂಬುದಾಗಿ ಆಗ್ರಹಿಸಿದರು.
ಈ ವೇಳೆ ಸೋಮಶೇಖರ ಲ್ಯಾವಿಗೆರೆ, ಚಂದ್ರಪ್ಪ ಕಲಸೆ, ಅನಿತಾ ಕುಮಾರಿ, ಗಣಪತಿ ಮಂಡಗಳಲೆ, ಸೈಯದ್ ಜಾಕೀರ್ ಗಿರೀಶ್ ಕೋವಿ ಇನ್ನಿತರರು ಹಾಜರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ…, ಸಂಪಾದಕರು
ರಾಜ್ಯದಲ್ಲಿ ಅತಿವೃಷ್ಟಿಯಿ೦ದ ಬೆಳೆ ಕಳೆದುಕೊ೦ಡ `ರೈತರ’ ಖಾತೆಗೆ ಹಣ ವರ್ಗಾವಣೆ : CM ಸಿದ್ದರಾಮಯ್ಯ ಘೋಷಣೆ








