ಶಿವಮೊಗ್ಗ: ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿ ಜನಗಣತಿಯ ವೇಳೆಯಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ ಧರ್ಮವೆಂದು, ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯಿತ, ಉಪ ಜಾತಿ ಕಾಲಂನಲ್ಲಿ ಬೇರೆ ಬೇರೆ ಉಪಜಾತಿ ನಮೂದಿಸುವಂತೆ ವೀರಶೈವ ಲಿಂಗಾಯಿತ ಸಮಾಜದ ಪ್ರಮುಖರಾದ ಟಿ.ಡಿ.ಮೇಘರಾಜ್ ಮನವಿ ಮಾಡಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸೋಮವಾರ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಾತಿ ಜನಗಣತಿ ಸಂದರ್ಭದಲ್ಲಿ ಗಣತಿದಾರರು ಕೇಳುವ 60 ಪ್ರಶ್ನೆಗಳಿಗೆ ಯಾವುದೇ ಗೊಂದಲಕ್ಕೆ ಈಡಾಗದೆ ಸಾರ್ವಜನಿಕರು ಉತ್ತರ ನೀಡಬೇಕು ಎಂದರು.
ಕೇಂದ್ರ ಸರ್ಕಾರ ಜಾತಿಜನಗಣತಿಗೆ ದಿನಾಂಕ ಘೋಷಣೆ ಮಾಡಿದೆ. ಆದರೆ ರಾಜ್ಯ ಸರ್ಕಾರ ಹಿಂದೆ ಕಾಂತರಾಜ್ ಸೇರಿದಂತೆ ಬೇರೆಬೇರೆ ಜಾತಿಗಣತಿ ವರದಿ ಅನುಷ್ಟಾನಕ್ಕೆ ತರಲು ವಿಫಲವಾಗಿದೆ. ಇದಕ್ಕಾಗಿ ನೂರಾರು ಕೋಟಿ ರೂಪಾಯಿ ವ್ಯಯ ಮಾಡಿದ್ದು ಎಲ್ಲವೂ ನೀರಿನಲ್ಲಿ ಹೋಮ ಮಾಡಿದಂತೆ ಆಗಿದೆ. ಮತ್ತೆ 450 ಕೋಟಿ ರೂ. ಖರ್ಚು ಮಾಡಿ ಜಾತಿಗಣತಿಗೆ ಮುಂದಾಗಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರವು ಜಾತಿ ಗಣತಿ ಸಂದರ್ಭದಲ್ಲಿ ಹಿಂದೂ ಧರ್ಮದ ಜೊತೆ ಕ್ರಿಶ್ಚಿಯನ್ ಸೇರಿಸುವ ಪ್ರಯತ್ನ ಮಾಡಿತ್ತು. ಸಾರ್ವಜನಿಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಕೈಬಿಟ್ಟಿತ್ತು. ಇದೀಗ ಮುಸ್ಲೀಂ ಜೊತೆ ಹಿಂದೂ ಧರ್ಮ ಸೇರಿಸುವ ಇನ್ನೊಂದು ಪ್ರಯತ್ನ ನಡೆಸಿದೆ. ಅನೇಕ ವಿರೋಧಾಭಾಸಗಳ ನಡುವೆ ಸಂವಿಧಾನಾತ್ಮಕವಾಗಿ ರಾಜ್ಯ ಸರ್ಕಾರ ಜಾತಿ ಜನಗಣತಿ ನಡೆಸುತ್ತಿದ್ದು, ಸೋಮವಾರದಿಂದ ಗಣತಿ ಆರಂಭವಾಗಿ ಹದಿನೈದು ದಿನ ನಡೆಯುತ್ತದೆ. ವೀರಶೈವ ಸಮಾಜ ಬಾಂಧವರು ಧರ್ಮದ ಕಾಲಂನಲ್ಲಿ ಹಿಂದೂ ಧರ್ಮ, ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯಿತ, ಉಪಜಾತಿ ಕಾಲಂನಲ್ಲಿ ಉಪಜಾತಿ ನಮೂದಿಸಲು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೆಳದಿ ರಾಜಗುರು ಹಿರೇಮಠದಲ್ಲಿ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಇತಿಹಾಸ ಪ್ರಸಿದ್ದವಾದ ಪಚ್ಚೆಲಿಂಗ ದರ್ಶನ ಕಾರ್ಯಕ್ರಮ ಇರುತ್ತದೆ. ವಿಜಯದಶಮಿ ಅಂಗವಾಗಿ ಶ್ರೀಮಠದಲ್ಲಿ ಪಚ್ಚೆಲಿಂಗ ದರ್ಶನ ಇರುತ್ತದೆ. ಸಾಗರದಿಂದ ಪಚ್ಚೆಲಿಂಗವನ್ನು ಮೆರವಣಿಗೆ ಮೂಲಕ ಶ್ರೀಮಠಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಶ್ರೀಮಠದಲ್ಲಿ ಪಚ್ಚೆಲಿಂಗಕ್ಕೆ ವಿಶೇಷ ಪೂಜೆ, ಚೌಡೇಶ್ವರಿ ದೇವಿಗೆ ಉಡಿ ತುಂಬುವ ಶಾಸ್ತç, ಬನ್ನಿ ಮುಡಿಯುವುದು, ಶ್ರೀಗಳ ಪಲ್ಲಕ್ಕಿ ಉತ್ಸವ ಇನ್ನಿತರೆ ಕಾರ್ಯಕ್ರಮ ನಡೆಯಲಿದೆ. ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕರೆ ನೀಡಿದರು.
ಈ ಸುದ್ದಿಗೋಷ್ಟಿಯ ವೇಳೆ ಆಪ್ ಕೋರ್ಸ್ ಅಧ್ಯಕ್ಷ ಬಿ.ಎ.ಇಂದೂಧರ ಬೇಸೂರು, ವಕೀಲ ಕೆ.ವಿ.ಪ್ರವೀಣ್, ಅಕ್ಷಯ ಸೌಹಾರ್ಧ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ದಿನೇಶ್ ಬರದವಳ್ಳಿ, ಅರುಣ್ ಪಾಟೀಲ್, ಕುಮಾರ್, ಸಚಿನ್, ಸಂಜಯ್ ಕುಮಾರ್ ಉಪಸ್ಥಿತರಿದ್ದರು.
ಶಿವಮೊಗ್ಗ: ಹಳೇ ಸೊರಬ ಪ್ರಾಥಮಿಕ ಸಹಕಾರ ಸಂಘಕ್ಕೆ 7.26 ಲಕ್ಷ ನಿವ್ವಳ ಲಾಭ
BREAKING: ನಾಳೆ ಮಧ್ಯಾಹ್ನಕ್ಕೆ ಜಾತಿಗಣತಿ ಪ್ರಶ್ನಿಸಿದ್ದ ಪಿಐಎಲ್ ವಿಚಾರಣೆ ಹೈಕೋರ್ಟ್ ಮುಂದೂಡಿಕೆ