ಶಿವಮೊಗ್ಗ: ನಿನ್ನೆಯ ಭಾನುವಾರದಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ತಾಳಗುಂದ ಹಳ್ಳಿಯ ವೀರಭದ್ರೇಶ್ವರ ದೇವಾಲಯದ ಬಳಿ ಕೊಳೆತ ಸ್ಥಿತಿಯಲ್ಲಿ ಚಿರತೆಯ ಮೃತದೇಹ ಪತ್ತೆಯಾಗಿದೆ.
ತಾಳಗುಂದ ಗ್ರಾಮಸ್ಥರು ಶಿರಾಳಕೊಪ್ಪ ಆರ್ ಎಫ್ ಓ ಜಾವೆದ್ ಅವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ತೆರಳಿದಂತ ಅವರು ಪರಿಶೀಲಿಸಿದಾಗ ಚಿರತೆ ಕತ್ತಿನಲ್ಲಿ ಉರುಲು ಇರುವುದು ಕಂಡುಬಂದಿದೆ. ಉರುಲಿನ ಕಾರಣ ಚಿರತೆ ಸಾವನ್ನಪ್ಪಿರುವ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.
ಪಶುವೈದ್ಯರನ್ನು ಕರೆಸಿದಂತ ಆರ್ ಎಫ್ ಓ ಜಾವೆದ್ ಅವರು ಸ್ಥಳದಲ್ಲೇ ಕಾನೂನಿನ ಅನುಸಾರ ಮರಣೋತ್ತರ ಪರೀಕ್ಷೆಯನ್ನು ಮಾಡಿಸಲಾಗಿದೆ. ಈ ವೇಳೆ ಚಿರತೆ ಮೂರು ನಾಲ್ಕು ದಿನದ ಹಿಂದೆಯೇ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ ಎನ್ನಲಾಗುತ್ತಿದೆ.
ಒಂದು ವಾರ, ಹದಿನೈದು ದಿನಗಳ ಹಿಂದೆಯೇ ಚಿರತೆ ಉರುಳಿಗೆ ಬಿದ್ದಿರುವ ಬಗ್ಗೆ ಅರಣ್ಯಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಚಿರತೆ ಉರುಳಿಗೆ ಬಿದ್ದಿದ್ದು ಎಲ್ಲಿ.? ಇಟ್ಟವರು ಯಾರು ಎನ್ನುವ ನಿಟ್ಟಿನಲ್ಲಿ ತನಿಖೆಯನ್ನು ನಡೆಸುತ್ತಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು…








