ಶಿವಮೊಗ್ಗ : ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವಂತ ದರ ನಿಗದಿಗೆ ಒತ್ತಾಯಿಸಿದ ಪ್ರತಿಭಟನೆಗೆ ಸಾಗರದಲ್ಲೂ ಬೆಂಬಲ ವ್ಯಕ್ತವಾಗಿದೆ. ಇಂದು ಸಾಗರದಲ್ಲೂ ಕಬ್ಬು ಬೆಳೆಗಾರರ ರೈತರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರೈತ ಸಂಘದಿಂದ ಹೆದ್ದಾರಿ ತಡೆ ನಡೆಸಿ ಆಗ್ರಹಿಸಲಾಯಿತು.
ಇಂದು ಕಬ್ಬಿನ ದರ ನಿಗಧಿ ಮಾಡುವಂತೆ ಒತ್ತಾಯಿಸಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಗುರ್ಲಾಪುರ ಕ್ರಾಸ್‌ನಿಂದ ರೈತ ಸಂಘ ನಡೆಸುತ್ತಿರುವ ಪ್ರತಿಭಟನೆ ಬೆಂಬಲಸಿ ಶಿವಮೊಗ್ಗ ಜಿಲ್ಲಾ ರೈತ ಸಂಘದ ವತಿಯಿಂದ ವರದಹಳ್ಳಿ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ರೈತರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ಬೆಳಗಾವಿ ಜಿಲ್ಲೆಯ ಗುರ್ಲಾಪುರ ಕ್ರಾಸ್‌ನಲ್ಲಿ ಕಬ್ಬಿಗೆ ದರ ನಿಗಧಿಪಡಿಸಲು ಒತ್ತಾಯಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ 9ನೇ ದಿನಕ್ಕೆ ಕಾಲಿರಿಸಿದೆ. ರಾಜ್ಯ ಸರ್ಕಾರ ರೈತರ ಪ್ರತಿಭಟನೆಯನ್ನು ಕೇವಲವಾಗಿ ಪರಿಗಣಿಸಿದ್ದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಪ್ರತಿಭಟನೆ ಪ್ರಾರಂಭವಾಗಿ ಐದಾರು ದಿನ ಕಳೆದರೂ ಮುಖ್ಯಮಂತ್ರಿಗಳು ರೈತರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಕಳೆದ ಎರಡು ದಿನಗಳಿಂದ ರೈತರ ಬೇಡಿಕ ಬಗ್ಗೆ ಮುಖ್ಯಮಂತ್ರಿಗಳು ಗಮನ ಹರಿಸಿದ್ದಾರೆ. ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ತೀವೃ ನಿರ್ಲಕ್ಷö್ಯ ಇರುವುದನ್ನು ರೈತ ಸಂಘ ಖಂಡಿಸುತ್ತದೆ ಎಂದರು.
ನಿರಂತರ ಹೋರಾಟದಿಂದ ರಾಜ್ಯ ಸರ್ಕಾರ ರೈತರ ಎದುರು ಮಂಡಿಯೂರಿದೆ. ರೈತರ ಬೇಡಿಕೆ ಈಡೇರಿಸಲು ರಾಜ್ಯ ಸರ್ಕಾರ ವಿಳಂಬವಾಗಿಯಾದರೂ ಮುಂದೆ ಬಂದಿದೆ. ರಾಜ್ಯ ಸರ್ಕಾರ ತಕ್ಷಣ ಕಬ್ಬಿಗೆ ರೂ. 3500 ದರ ನಿಗಧಿ ಮಾಡಬೇಕು. ಮುಖ್ಯಮಂತ್ರಿಗಳ ಮೇಲೆ ಭರವಸೆ ಇರಿಸಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವುದನ್ನು ತಾತ್ಕಾಲಿಕವಾಗಿ ರಾಜ್ಯಾದ್ಯಂತ ತಡೆಹಿಡಿಯಲಾಗಿದೆ. ಕಬ್ಬು ದರ ನಿಗಧಿಪಡಿಸುವ ವಿಚಾರದಲ್ಲಿ ಕಾಂಗ್ರೇಸ್‌ನವರು ಕೇಂದ್ರ ಸರ್ಕಾರದ ಮೇಲೆ, ಬಿಜೆಪಿಯವರು ರಾಜ್ಯ ಸರ್ಕಾರದ ಮೇಲೆ ದೋಷಾರೋಪ ಮಾಡಿ ರೈತರನ್ನು ಮಂಗ ಮಾಡುವ ಪ್ರಕ್ರಿಯೆ ತಕ್ಷಣ ಕೈಬಿಡಬೇಕು. ರೈತರ ಬೇಡಿಕೆಯನ್ನು ತಕ್ಷಣ ಈಡೇರಿಸಬೇಕು. ಇಲ್ಲವಾದಲ್ಲಿ ರಸ್ತೆತಡೆಯನ್ನು ಮುಂದುವರೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ರಮೇಶ್ ಕೆಳದಿ ಮಾತನಾಡಿ, ರಾಜ್ಯ ಸರ್ಕಾರ ಕಬ್ಬು ಬೆಳೆಯುವ ರೈತರ ಹಿತಾಸಕ್ತಿ ಕಾಪಾಡುವತ್ತ ಗಮನ ಹರಿಸಬೇಕು. ಬೆಳಗಾವಿ ಜಿಲ್ಲೆಯಲ್ಲಿ ನಡೆಯುತ್ತಿರುವ ಪ್ರತಿಭಟನೆ ರಾಜ್ಯದಾದ್ಯಂತ ಹರಡಿದೆ. ರೈತರ ವಿಷಯ ಬಂದಾಗ ಸರ್ಕಾರ ಮೀನಾಮೇಷ ಎಣಿಸಬಾರದು. ಕಬ್ಬಿಗೆ ತಕ್ಷಣ ದರ ನಿಗಧಿ ಮಾಡುವ ಮೂಲಕ ರೈತರನ್ನು ನಷ್ಟದಿಂದ ಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿನೇಶ್ ಕುಮಾರ್, ಮೇಘರಾಜ್, ಚಂದ್ರು ಪೂಜಾರಿ, ಶಿವು ಪೂಜಾರಿ, ಗೋಪಾಲ ಲ್ಯಾವಿಗೆರೆ, ಸಂತೋಷ್, ದೇವರಾಜ್ ಬೆಳಂದೂರು, ಶಶಿಕಲಾ ಹುಣಸೂರು, ಸುಜಾತ ಶಿರವಾಳ, ತನ್ವೀರ್ ಶೇಕ್ ಇನ್ನಿತರರು ಹಾಜರಿದ್ದರು.
BREAKING: ಬೆಳಗಾವಿಯಲ್ಲಿ ಕಲ್ಲುತೂರಟಾದಿಂದ ಡಿವೈಎಸ್ಪಿ ಕೈ ಮುರಿತ, ನಾಲ್ಕು ಬಸ್ಸುಗಳ ಗಾಜು ಪುಡಿಪುಡಿ
ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲಾಗದ ಸಿಎಂ ಸಿದ್ಧರಾಮಯ್ಯ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ: HDK








