ಶಿವಮೊಗ್ಗ: ಸಾಗರದಲ್ಲಿ ಹುಟ್ಟಿ ಬೆಳೆದು ಅಮೇರಿಕಾದಲ್ಲಿ ವಾಸಿಯಾಗಿರುವಂತ ಅಪ್ಪಟ ಕನ್ನಡಿಗ ಡಾ.ಡಿಎಂ ಸಾಗರ್ ಅವರು ಕನ್ನಡದಲ್ಲಿ ಬರೆದಿರುವಂತ ವಿಲಕ್ಷಣ ಜಲಜಾಲ ಎನ್ನುವ ಪುಸ್ತಕವನ್ನು ನಾಳೆ ಬಿಡುಗಡೆಗೊಳಿಸಲಾಗುತ್ತಿದೆ.
ಇಂದು ಸಾಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಂತ ಅಶ್ವಿನಿ ಕುಮಾರ್ ಅವರು, ದೊಡ್ಡೇರಿ ಮಹಾಬಲಗಿರಿರಾವ್, ಡಾ.ಡಿಎಂ ಸಾಗರ್ ಮತ್ತು ರಜನಿ ದೊಡ್ಡೇರಿ ಕುಟುಂಬ, ಅಭಿನಯ ಸಾಗರ(ರಿ) ಹಾಗೂ ಜೋಷಿ ಫೌಂಡೇಷನ್ ಸಾಗರ ಇವರ ಸಂಯುಕ್ತ ಆಶ್ರಯದಲ್ಲಿ ನಾಳೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ ಎಂದರು.
ದಿನಾಂಕ 21-11-2024ರ ನಾಳೆ ಸಂಜೆ 4 ಗಂಟೆಗೆ ಸಾಗರ ನಗರದ ಅಗ್ರಹಾರ ಬಳಿಯಲ್ಲಿ ಇರುವಂತ ಶೃಂಗೇರಿ ಶಂಕರಮಠದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಪುಸ್ತಕ ಬಿಡುಗಡೆಗೂ ಮುನ್ನ ಸುಭದ್ರಾ ಕಲ್ಯಾಣ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಆ ಬಳಿಕ ಸಂಜೆ 7 ಗಂಟೆಗೆ ಡಾ.ಡಿಎಂ ಸಾಗರ್ ಅವರು ಬರೆದಿರುವಂತ ವಿಲಕ್ಷಣ ಜಲಜಾಲ ಎನ್ನುವಂತ ನೀರಿನ ಕುರಿತು ವೈಜ್ಞಾನಿಕ ಕೌತುಕಗಳು ಇರುವಂತ ಪುಸ್ತಕ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ನಿವೃತ್ತ ಮುಖ್ಯೋಪಾಧ್ಯಾಯರಾದಂತ ದೊಡ್ಡೇರಿ ಮಹಾಬಲಗಿರಿ ರಾವ್ ಅವರು “ವಿಲಕ್ಷಣ ಜಲಜಾಲ” ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ. ಪುಸ್ತಕದ ಕುರಿತಂತೆ ಪರಿಸರ ಪ್ರೇಮಿ ಅಖಿಲೇಶ್ ಚಿಪ್ಳಿ ಅವರು ಮಾತನಾಡಲಿದ್ದಾರೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸಾಗರ ಸಮಾಜಿಕ ಮುಖಂಡರಾದಂತ ಟಿ.ವಿ ಪಾಂಡುರಂಗ, ನಗರಸಭಾ ಸದಸ್ಯ ಬಿ.ಹೆಚ್ ಲಿಂಗರಾಜು ಭಾಗಿಯಾಗಲಿದ್ದಾರೆ ಎಂದರು.
ಡಾ.ಡಿಎಂ ಸಾಗರ್ ಮಾತನಾಡಿ ನೀರಿನ ಬಗ್ಗೆ ಕುರಿತು ಬರೆದಂತ ವೈಜ್ಞಾನಿಕ ಪುಸ್ತಕ ಇದಾಗಿದೆ. ಇಂಗ್ಲೀಷ್ ನಲ್ಲಿರುವಂತ ಕಠಿಣ ಪದಗಳನ್ನು ಸರಳ ಕನ್ನಡದಲ್ಲಿ ಪ್ರತಿಯೊಬ್ಬರಿಗೂ ಅರ್ಥವಾಗುವಂತ ರೀತಿಯಲ್ಲಿ ಬರೆದು ತಿಳಿಸುವಂತ ಪ್ರಯತ್ನ ಮಾಡಲಾಗಿದೆ. ಇದೊಂದು ನನ್ನ ಪ್ರಥಮ ಪುಸ್ತಕವಾಗಿದ್ದು, ನೀರಿನ ಬಗ್ಗೆ ಸಮಗ್ರ ಚಿತ್ರಣವನ್ನು ಓದುಗರಿಗೆ ತೆರದಿಡುವಂತ ಕೆಲಸ ಮಾಡಿದ್ದೇನೆ ಎಂದು ಹೇಳಿದರು.
ಡಾ.ಡಿಎಸ್ ಸಾಗರ್ ಯಾರು.?
ಇವರು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಹುಟ್ಟಿ ಬೆಳೆದು, ನ್ಯೂಕ್ಲಿಯರ್ ಭೌತಶಾಸ್ತ್ರದಲ್ಲಿ ಕುವೆಂಪು ವಿವಿಯಿಂದ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಾರೆ. ಅಲ್ಲದೇ ಸುವರ್ಣ ಪದಕ ಪಡೆದ ವಿದ್ಯಾರ್ಥಿ ಕೂಡ. ಆ ಬಳಿಕ ನೆದರ್ ಲ್ಯಾಂಡ್ಸ್ ನ ಗ್ರೋನಿರಂಜನ್ ವಿವಿಯಿಂದ ಅಪ್ಟಿಕಲ್ ಕಂಡೆನ್ಡ್ ಮ್ಯಾಟರ್ ಫಿಸಿಕ್ಸ್ ನಲ್ಲಿ ಪಿಹೆಚ್ ಡಿ ಪದವಿಯನ್ನು ಪಡೆದಿದ್ದಾರೆ.
ಸೆಮಿ ಕಂಡಕ್ಟರ್ ಕ್ವಾಂಟಮ್ ಡಾಟ್ಸ್, ನ್ಯಾನೋ ತಂತ್ರಜ್ಞಾನ, ಅಪ್ಟಿಕಲ್ ಫಿಸಿಕ್ಸ್, ಲೇಸರ್ ಸ್ಪೆಕ್ಟೋಸ್ಕೋಪಿ ಇತ್ಯಾದಿ ಭೌತ ಹಾಗೂ ಭೌತೀಯ ರಾಸಾಯನ ಶಾಸ್ತ್ರಗಳಲ್ಲಿ ಸಂಶೋಧನೆ ನಡೆಸಿದ, ನಡೆಸುತ್ತಿರುವಂತ ಸಂಶೋಧಕರು ಹೌದು.
ನ್ಯಾನೋ ಲೆಟರ್ಸ್, ಜರ್ನಲ್ ಆಫ್ ಅಮೇರಿಕಾ ಕೆಮಿಕಲ್ ಸೊಸೈಟಿ ಹಾಗೂ ಇನ್ನಿತರ ಪ್ರಭಾವಿ ಜರ್ನಲ್ಸ್ ಗಳಲ್ಲಿ ಇವರು ಭೌತೀಯ ಹಾಗೂ ಭೌತೀಯ ರಾಸಾಯನ ಶಾಸ್ತ್ರದ ಬಗ್ಗೆ ಬರೆದಂತ ಲೇಖನಗಳು ಪ್ರಕಟಗೊಂಡಿದ್ದಾವೆ.
ಪ್ರಸ್ತುತ ಪ್ರಿನ್ಸಿಪಾಲ್ ಅಪ್ಟಿಕಲ್ ಸೈಂಟಿಸ್ಟ್ ಆಗಿ ಅಮೇರಿಕಾದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರದ ಡಾ.ಡಿ.ಎಸ್ ಸಾಗರ್ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬರೆದ ವಿಲಕ್ಷಣ ಜಲಜಾಲ ಎನ್ನುವ ಕೃತಿ ನಾಳೆ ಸಾಗರದ ಅಗ್ರಹಾರದಲ್ಲಿರುವಂತ ಶೃಂಗೇರಿ ಶಂಕರ ಮಠದಲ್ಲಿ ಬಿಡುಗಡೆಯಾಗುತ್ತಿದೆ.
ವರದಿ: ವಸಂತ ಬಿ ಈಶ್ವರಗೆರೆ
ರಾಜ್ಯದ ಜನತೆಗೆ ಗಮನಕ್ಕೆ: ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ತಜ್ಞ ವೈದ್ಯರಿಂದ ಸಲಹೆ ಪಡೆಯಲು ಸಹಾಯವಾಣಿ ಆರಂಭ