ಶಿವಮೊಗ್ಗ: ಸರ್ಕಾರಿ ಶಾಲೆಗಳಲ್ಲಿ ಯಾವುದೇ ಬೇಧ ಭಾವ ಮಾಡದೇ, ಎಲ್ಲಾ ಮಕ್ಕಳನ್ನು ಸಮಾನವಾಗಿ ಕಾಣಬೇಕು. ಅದೇ ಕಾರಣಕ್ಕೆ ಬಡವ-ಬಲ್ಲಿದ, ಮೇಲು-ಕೀಳು ಎಂಬ ಬೇಧ ಭಾವ ಬಾರದಂತೆ ಇರಿಸಲು ಸಮವಸ್ತ್ರವನ್ನು ಸರ್ಕಾರ ಉಚಿತವಾಗಿ ನೀಡುತ್ತಿದೆ. ಇದರ ನಡುವೆಯೂ ಸಾಗರ ತಾಲ್ಲೂಕಿನ ಬೇಳೂರು ಶಾಲೆಯಲ್ಲಿ ಜಾತಿ ತಾರತಮ್ಯವನ್ನು ಊಟದ ವಿಚಾರದಲ್ಲಿ ಮಾಡಿರೋದಾಗಿ ಹೇಳಲಾಗುತ್ತಿದೆ. ಈ ವಿಷಯವನ್ನು ಪ್ರಶ್ನಿಸಿದಂತ ದಲಿತ ಮುಖಂಡನಿಗೆ ಬೆದರಿಕೆ ಕೂಡ ಹಾಕಲಾಗಿದೆ ಎನ್ನಲಾಗುತ್ತಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಬೆಳೆಯೂರು ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಶಾಲೆಯಲ್ಲೇ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆ ಕೂಡ ಮಾಡಲಾಗಿತ್ತು. ಹೀಗಿದ್ದರೂ ಬಂದಗದ್ದೆಯ ಕೆಲ ಮೇಲ್ವರ್ಗದ ಕುಟುಂಬದ ವಿದ್ಯಾರ್ಥಿಗಳು ಮಾತ್ರ ಮನೆಯಿಂದ ಊಟ ತೆಗೆದುಕೊಂಡು ವೇದಿಕೆಯ ಮುಂಭಾಗದಲ್ಲೇ ಕೆಳ ವರ್ಗದ ವಿದ್ಯಾರ್ಥಿಗಳೊಂದಿಗೆ ಸೇರದೆ ಪಂಕ್ತಿ ಬೇಧ ತೋರಿದ್ದನ್ನು ದಲಿತ ಮುಖಂಡ ಅಣ್ಣಪ್ಪ ಕೆಳದಿಪುರ ಗಮನಿಸಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ಯಾವುದೇ ಜಾತಿ ಬೇದ ಮಾಡುವಂತಿಲ್ಲ. ಪಂಕ್ತಿ ಬೇಧವೂ ಇಲ್ಲ. ಹೀಗಿದ್ದರೂ ಯಾಕೆ ಇಲ್ಲಿ ಕೆಲವರು ಅಲ್ಲಿ, ಮತ್ತೆ ಕೆಲವರು ಇಲ್ಲಿ ಊಟ ಎಂಬುದಾಗಿ ಕೇಳಿದ್ದಾರೆ. ಇದೇ ವಿಚಾರಕ್ಕಾಗಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಅಣ್ಣಪ್ಪ ಡಿ.ಕೆ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆಯಲ್ಲೇ ಎಸ್ ಡಿ ಎಂ ಸಿ ಅಧ್ಯಕ್ಷ ಅಣ್ಣಪ್ಪ ಡಿ.ಕೆ ಎಂಬುವರು ಇದು ನಮ್ಮ ಶಾಲೆಯ ಕಾರ್ಯಕ್ರಮ, ಇಲ್ಲಿ ನಾನು ಹೇಳಿದ ಹಾಗೆ ನಡೆಯೋದು ಎಂಬುದಾಗಿ ಏರು ಧ್ವನಿಯಲ್ಲೇ ಏಳೆಂಟು ಮಂದಿಯೊಂದಿಗೆ ಬೆದರಿಕೆ ಹಾಕಿರೋದಾಗಿ ದಲಿತ ಮುಖಂಡ ಅಣ್ಣಪ್ಪ ಕೆಳದಿಪುರ ಆರೋಪಿಸಿದ್ದಾರೆ.
ಅಧ್ಯಕ್ಷರ ಬೆದರಿಕೆಗೆ ಜಗ್ಗದ ಅಣ್ಣಪ್ಪ ಕೆಳದಿಪುರ ಅವರು, ಬೆಳೆಯೂರು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ನೀವಾದರೇ, ನಾನು ಸದಸ್ಯ ಕೂಡ. ಕೇಳುವ ಹಕ್ಕಿದೆ. ನನ್ನು ಮಗಳು ಕೂಡ ಇದೇ ಶಾಲೆಯಲ್ಲಿ ಓದುತ್ತಿದ್ದಾಳೆ. ಊಟದ ವಿಚಾರದಲ್ಲಿ ಜಾತಿ ತಾರತಮ್ಯ ತೋರುವುದು ಸರಿಯಲ್ಲ. ಎಲ್ಲರೂ ಒಂದು, ಮೇಲು-ಕೀಳು ಎಂಬ ಮನೋಭಾವನೆ ವಿದ್ಯಾರ್ಥಿಗಳಲ್ಲಿ ಹುಟ್ಟು ಹಾಕಬೇಡಿ ಎಂಬುದಾಗಿ ತಿಳಿಹೇಳೋ ಪ್ರಯತ್ನ ಮಾಡಿದ್ದಾರೆ. ಆದರೇ ತಪ್ಪು ತಿದ್ದಿಕೊಳ್ಳಬೇಕಾಗಿದ್ದಂತವರೇ, ಯಾರಿಗೆ ಕಪ್ಲೇಂಟ್ ಮಾಡ್ತಿರೋ ಮಾಡಿ ಹೋಗಿ ಎಂಬುದಾಗಿ ಅವಾಜ್ ಹಾಕಿರೋದಾಗಿ ಹೇಳಲಾಗುತ್ತಿದೆ.
ಈ ಹಿನ್ನಲೆಯಲ್ಲಿ ಸಾಗರ ತಾಲ್ಲೂಕಿನ ಶಿಕ್ಷಣಾಧಿಕಾರಿಗಳು ಬೇಳೂರು ಸರ್ಕಾರಿ ಶಾಲೆಗೆ ಭೇಟಿ ನೀಡಬೇಕು. ಶಾಲಾ ಮಕ್ಕಳಲ್ಲಿ ಊಟದ ವಿಚಾರದಲ್ಲಿ ಮೇಲ್ವರ್ಗದವರಿಗೆ ಒಂದು ರೀತಿಯಾಗಿ, ಕೆಳ ವರ್ಗದವರಿಗೆ ಮತ್ತೊಂದು ರೀತಿಯಾಗಿ ಬೇಧ ಭಾವ ಮಾಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ದಲಿತ ಸಂಘಟನೆಗಳೊಂದಿಗೆ ಶಾಲೆ, ಬಿಇಓ ಕಚೇರಿಯ ಬಳಿಯಲ್ಲಿ ಉಗ್ರ ಹೋರಾಟ ಮಾಡುವುದಾಗಿ ಅಣ್ಣಪ್ಪ ಕೆಳದಿಪುರ ಎಚ್ಚರಿಕೆ ನೀಡಿದ್ದಾರೆ.








