ಶಿವಮೊಗ್ಗ : ನವೆಂಬರ್.15ರಂದು ಸಾಗರದ ನಗರಸಭೆ ಆವರಣದಲ್ಲಿರುವಂತ ಗಾಂಧಿ ಮೈದಾನದಲ್ಲಿ ಬೆಳಗ್ಗೆ 11 ಗಂಟೆಯಿಂದ ರಾತ್ರಿ 8.30ರವರೆಗೆ 2025ನೇ ಸಾಲಿನ ಅವ್ವ ಮಹಾಸಂತೆ ನಡೆಯಲಿದೆ ಎಂಬುದಾಗಿ ಜೀವನ್ಮುಖಿ ಸಂಸ್ಥೆಯ ಪ್ರತಿಭಾ ತಿಳಿಸಿದ್ದಾರೆ.
ಬುಧವಾರದಂದು ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಜೀವನ್ಮುಖಿ ಮತ್ತು ಚರಕ ವಿವಿಧೋದ್ದೇಶ ಮಹಿಳಾ ಸಂಸ್ಥೆಗಳ ಸಹಕಾರದೊಂದಿಗೆ 3ನೇ ಅವ್ವ ಮಹಾಸಂತೆ ನವೆಂಬರ್.15ರಂದು ಆಯೋಜಿಸಲಾಗಿದೆ. ಈ ಅವ್ವ ಮಹಾಸಂತೆಯನ್ನು ಗ್ರಾಹಕರಾಗಿ ಬನ್ನಿ ಮಹಿಳಾ ಕುಶಲಕರ್ಮಿಗಳನ್ನು ಬೆಂಬಲಿಸಿ ಘೋಷವಾಕ್ಯದಡಿ ನಡೆಸಲಾಗುತ್ತಿದೆ. ಮಹಿಳಾ ಉದ್ಯಮಿ ಸರೋಜಿನಿ ಎಸ್. ನಾಯ್ಕ್ ಅವ್ವ ಸಂತೆಯನ್ನು ಉದ್ಘಾಟಿಸಲಿದ್ದು, ಚರಕ ಸಂಸ್ಥೆಯ ಮಹಾಲಕ್ಷಿ ಅಧ್ಯಕ್ಷತೆ ವಹಿಸಲಿದ್ದು, ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಪೌರಾಯುಕ್ತ ಎಚ್.ಕೆ.ನಾಗಪ್ಪ ಉಪಸ್ಥಿತರಿರುವರು ಎಂದು ಹೇಳಿದರು.
3ನೇ ಅವ್ವ ಮಹಾಸಂತೆಯನ್ನು ಅತ್ಯಂತ ವಿಶೇಷವಾಗಿ ಆಯೋಜಿಸಲಾಗಿದೆ. ರಾಜ್ಯದ ಬೇರೆಬೇರೆ ಭಾಗಗಳಿಂದ ಕುಶಲಕರ್ಮಿಗಳ ಗೃಹೋತ್ಪನ್ನಗಳು, ಕೈಮಗ್ಗ ವಸ್ತುಗಳು, ಸ್ಥಳೀಯ ಸಾಂಪ್ರದಾಯಿಕ ತಿನಿಸುಗಳು ಸಂತೆಯಲ್ಲಿ ಲಭ್ಯವಿರುತ್ತದೆ. ಚರಕ ಸಂಸ್ಥೆಯ ಕೈಮಗ್ಗ ವಸ್ತುಗಳು, ಇಕ್ರಾ ಸಂಸ್ಥೆಯ ಸಣ್ಣ ರೈತರು ಬೆಳೆದ ರಸಾಯನಿಕ ಮುಕ್ತ ದವಸ ಧಾನ್ಯಗಳ ನೇರ ಮಾರಾಟ ಇರುತ್ತದೆ. ಈ ಬಾರಿ 22ಕ್ಕೂ ಹೆಚ್ಚು ಸ್ಟಾಲ್ ಗಳನ್ನು ಹಾಕಲಾಗುತ್ತಿದೆ ಎಂದರು.
ಸಾಗರದ ಜನತೆಗೆ ವಿಶೇಷ ಗಮನಕ್ಕೆ ಎನ್ನುವಂತೆ ಇದೇ ಮೊದಲ ಬಾರಿಗೆ ಹಳೆಯ ರೇಷ್ಮೆ ಸೀರೆಗಳನ್ನು ತೆಗೆದುಕೊಂಡು ಅದಕ್ಕೆ ನಗದಾಗಿ ಹಣವನ್ನು ಸ್ಥಳದಲ್ಲೇ ನೀಡುವಂತ ಸ್ಟಾಲ್ ಕೂಡ ಈ ಬಾರಿಯ ಅವ್ವ ಮಹಾಸಂತೆಯಲ್ಲಿ ಇರಲಿದೆ. ಇದರ ಸದುಪಯೋಗವನ್ನು ಸಾಗರದ ಜನತೆಯು ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಇದರ ಜೊತೆಗೆ ವೈವಿಧ್ಯಮಯ ವಸ್ತುಗಳ ಮಾರಾಟ, ವಿವಿಧ ಖಾಧ್ಯಗಳ ಪ್ರದರ್ಶನ ಮಾರಾಟ ಇರುತ್ತದೆ. ಜೀವನ್ಮುಖಿ ಸದಸ್ಯರಿಂದ ನೆಲದ ಧ್ವನಿ ಗಾಯನ ಇರುತ್ತದೆ. ಸಾಗರ ತಾಲ್ಲೂಕಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಲ್ಲಿ ಪಾಲ್ಗೊಂಡು ಮೂರನೇ ಅವ್ವ ಮಹಾಸಂತೆಯನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಈ ಸುದ್ದಿಗೋಷ್ಟಿಯಲ್ಲಿ ರಂಜಿನಿ, ಸರಿತಾ, ಪ್ರತಿಭಾ, ಸೌಮ್ಯ, ಮಮತಾ ಜೈನ್, ರೋಹಿಣಿ, ಪದ್ಮಶ್ರೀ ಹಾಜರಿದ್ದರು.
ಅವ್ವ ಮಹಾಸಂತೆ 2025ರ ವಿಶೇಷತೆ ಏನು?
- ಸ್ಥಳದಲ್ಲಿಯೇ ಸೇವಿಸಬಹುದಾಗ ಹಾಗೂ ಮನೆಗೆ ಕೊಂಡೊಯ್ಯಬಹುದಾದ ಶುಚಿರುಚಿಯಾದ ಸಾಂಪ್ರಾದಾಯಿಕ 50ಕ್ಕೂ ಹೆಚ್ಚು ಬಗೆಯ ತಿನಿಸುಗಳು ಲಭ್ಯ
- ಚರಕ ಸಂಸ್ಥೆಯ ಕೈಮಗ್ಗ ಮತ್ತು ನೈಸರ್ಗಿಕ ಬಣ್ಣಗಾರಿಕೆಯ ವೈವಿಧ್ಯಮಯ ಉಪಯುಕ್ತ ಉತ್ಪನ್ನಗಳು ರಿಯಾಯಿತಿ ದರದಲ್ಲಿ ದೊರೆಯಲಿವೆ.
- ಇಕ್ರಾ ಸಂಸ್ಥೆಯ ಸಣ್ಣ ರೈತರು ಬೆಳೆದ ರಾಸಾಯನಿಕ ಮುಕ್ತ ದವಸ-ಧಾನ್ಯಗಳು ರೈತ ಮಹಿಳೆಯರಿಂದಲೇ ನೇರ ಮಾರಾಟಕ್ಕೆ ಲಭ್ಯವಿದೆ.
- ಬಾಳೇನಾರಿನ ವೈವಿಧ್ಯಮಯ ಉತ್ಪನ್ನಗಳು, ಮಲೆನಾಡಿನ ಹಾಗೂ ಉತ್ತರ ಕನ್ನಡ ಭಾಗದ ಶುದ್ಧ ಮಸಾಲೆ, ಸಾಂಬಾರು ಪದಾರ್ಥಗಳು, ಉಪ್ಪಾಗೆ ತುಪ್ಪ, ಅಲಂಕಾರಿಕ ಹಾಗೂ ಔಷಧೀಯ ಗುಣವುಳ್ಳ ಸಸ್ಯಗಳೂ ಸಹ ಲಭ್ಯವಿದೆ.
- ಮಣ್ಣಿನ, ಲೋಹದ, ಬಟ್ಟೆಯ ಆಕ್ಷಕ ವಿನ್ಯಾಸದ ಆಭರಣಗಳು, ಆಲಂಕಾರಿಕ ವಸ್ತುಗಳು, ಕೇಶವಿನ್ಯಾಸದ ಹಲವಾರು ಬಗೆಯ ಉತ್ಪನ್ನಗಳು ದೊರೆಯಲಿವೆ.
- ಮನೆಬಳಕೆಗೆ ಅಗತ್ಯವಿರುವ ರಾಸಾಯನಿಕ ಮುಕ್ತ ಸಾಬೂನು ಸೇರಿದಂತೆ ಮನೆ ಸ್ವಚ್ಚತೆಗೆ ಬಳಸು ದ್ರವ ಪದಾರ್ಥಗಳು, ಸ್ವಚ್ಚತೆಗೆ ಬಳಸುವ ಉತ್ಪನ್ನಗಳು, ನೈಸರ್ಗಿಕ ಪ್ರಸಾಧನ ಸಾಮಗ್ರಿಗಳು ಸಿಗಲಿವೆ.
- ಗುಣಮಟ್ಟದ ಕಾಸ್ಟ್ ಐರನ್ ತವಾಗಳು, ಬಗೆ ಬಗೆಯ ಕೈಚೀಲಗಳು ಲಭ್ಯ
- ಮರದ ಗಾಣದ ಶುದ್ಧ ಶೇಂಗಾ ಹಾಗೂ ಕೊಬ್ಬರಿ ಎಣ್ಣೆಗಳು, ಜೋನಿಬೆಲ್ಲ, ತುಪ್ಪ, ಜೇನುತುಪ್ಪ, ಉಪ್ಪಿನಕಾಯಿ, ಹಪ್ಪಳ ಸಂಡಿಗೆ ಸೇರಿದಂತೆ ಇತರೆ ವಸ್ತುಗಳು ಸಿಗಲಿದ್ದಾವೆ.
ಸಾಗರ ತಾಲ್ಲೂಕಿನ ಜನರು ಬನ್ನಿ, ಭೇಟಿ ನೀಡಿ, ಮಹಿಳೆಯರ ಸ್ವಾಭಿಮಾನಿ ನಡಿಗೆಗೆಗೆ ಜೊತೆಯಾಗಿ. ಆದರೇ ಪಾರ್ಸೆಲ್ ತೆಗೆದುಕೊಂಡು ಹೋಗುವವರು ಕೈಚೀಲ ಹಾಗೂ ಡಬ್ಬಿಗಳನ್ನು ತೆಗೆದುಕೊಂಡು ಬರಬೇಕು. ಪ್ಲಾಸ್ಟಿಕ್ ಕೈಚೀಲ ಅವ್ವ ಮಹಾಸಂತೆಯಲ್ಲಿ ಬಳಕೆ ಇಲ್ಲ ಎಂಬುದಾಗಿ ಜೀವನ್ಮುಖಿ ಸಂಸ್ಥೆಯ ಪ್ರತಿಭಾ ಹೇಳಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ಶಿವಮೊಗ್ಗ: ಆನಂದಪುರ ವ್ಯಾಪ್ತಿಯ ರೈತರಿಗೆ ಪೊಲೀಸರಿಂದ ಮಹತ್ವದ ಮಾಹಿತಿ, ಈ ಸೂಚನೆ








