ಶಿವಮೊಗ್ಗ : ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ನವಿಲೆ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಏ.26 ರಿಂದ 28 ರವರೆಗೆ ವೈವಿಧ್ಯಮಯ ಹಣ್ಣುಗಳು ಮತ್ತು ಆಹಾರ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಆರ್.ಸಿ.ಜಗದೀಶ್ ತಿಳಿಸಿದರು.
ಹಣ್ಣು ಮತ್ತು ಆಹಾರ ಮೇಳದ ಕುರಿತು ಮಾಹಿತಿ ನೀಡಲು ಬುಧವಾರ ನವಿಲೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗದ ಕೃಷಿ ವಿಜ್ಞಾನ ಕೇಂದ್ರವು 2025 ಕ್ಕೆ ತನ್ನ 25 ವರ್ಷಗಳ ನಿರಂತರ ರೈತಪರ ಸೇವಾ ಕೊಡುಗೆಯನ್ನು ಪೂರೈಸಿ ರಜತ ಮಹೋತ್ಸವವನ್ನು ಆಚರಿಸಿಕೊಳ್ಳುವ ಪ್ರಯುಕ್ತ ಶಿವಮೊಗ್ಗದ ಕೃಷಿ ವಿಜ್ಞಾನ ಕೇಂದ್ರ, ನವಿಲೆ ಆವರಣದಲ್ಲಿ ಏಪ್ರಿಲ್ 26 ರಿಂದ 28 ರವರೆಗೆ ‘ಹಣ್ಣು ಮತ್ತು ಆಹಾರ ಮೇಳ’ವನ್ನು ಆಯೋಜಿಸಲಾಗಿದೆ. ಮೂರು ದಿನಗಳ ಕಾಲ ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ಈ ಮೇಳ ಜರುಗಲಿದ್ದು, ಈ ಮೇಳದಲ್ಲಿ ವೈವಿಧ್ಯಮಯ ಮಾವಿನ ಹಣ್ಣುಗಳು, ಹಲಸು, ಬಾಳೆ ಹಾಗೂ ವಿವಿಧ ಜಾತಿಯ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದೆ.
ಹಣ್ಣು ಪ್ರಿಯರಿಗಾಗಿ ಹಣ್ಣುಗಳ ರಾಜನೆಂದೇ ಕರೆಯಲ್ಪಡುವ ಮಾವಿನ ಹಣ್ಣಿನ 30 ವಿಶಿಷ್ಟ ಮಾವಿನ ತಳಿಗಳಾದ ಆಲ್ಫಾನ್ಸೋ, ಬಾದಾಮಿ, ಕೇಸರ್, ಮಲಗೋವಾ, ಮಲ್ಲಿಕಾ, ನೀಲಂ, ರಸಪುರಿ, ಸಿಂಧೂರ, ತೋತಾಪುರಿ, ಅಪ್ಪೆ ಮಿಡಿ ತಳಿಗಳ ಪ್ರದರ್ಶನ ಮತ್ತು ಮಾರಾಟವಿರುತ್ತದೆ. ಅಲ್ಲದೆ, 20 ವಿವಿಧ ಹಲಸಿನ ತಳಿಗಳಾದ ಸಿದ್ದು ಹಲಸು, ಶಂಕರ, ಸರ್ವಋತು, ರುದ್ರಾಕ್ಷಿ. ಕೆಂಪು, ಚಂದ್ರ ಹಲಸು, ಹೆಬ್ಬಾಳ ಸೇರಿದಂತೆ ಸಖರಾಯಪಟ್ಟಣದ ಸ್ಥಳೀಯ ವಿಶೇಷ ತಳಿಗಳ ಪ್ರದರ್ಶನ ಹಾಗೂ ಮಾರಾಟ ಮತ್ತು ವಿವಿಧ ತಳಿಯ ಬಾಳೆ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತದೆ.
ಬಿಜಾಪುರ, ಬಾಗಲಕೋಟೆ ಮತ್ತಿತರ ಭಾಗಗಳಿಂದ ಥಾಮ್ಸನ್ ಸೀಡ್‌ಲೆಸ್, ಶರದ್, ಕೃಷ್ಣ ಶರದ್ ಇತ್ಯಾದಿ ತಳಿಯ ರುಚಿಕರ ದ್ರಾಕ್ಷಿ ಹಣ್ಣುಗಳು ಆಗಮಿಸುತ್ತಿವೆ. ಬೆಂಗಳೂರು ಗ್ರಾಮಾಂತರ ಭಾಗದಿಂದ ಬೆಂಗಳೂರು ಬ್ಲೂ ದ್ರಾಕ್ಷಿ ಬರಲಿದೆ. ಹೀಗಾಗಿ ದ್ರಾಕ್ಷಿ ಪ್ರಿಯರಿಗೆ ಬಗೆ ಬಗೆಯ ಹಣ್ಣುಗಳು ಲಭಿಸಲಿವೆ. ಅಲ್ಲದೆ, ಗೆಡ್ಡೆ-ಗೆಣಸು ತಳಿಗಳ ಪ್ರದರ್ಶನ ಹಾಗೂ ಬೇಲದ ಹಣ್ಣು, ಅಂಜೂರ ಹಣ್ಣು, ಬಿಜಾಪುರದ ನಿಂಬೆ ಹಣ್ಣು, ಮತ್ತು ಇವುಗಳ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಏರ್ಪಡಿಸಲಾಗಿದೆ ಮತ್ತು ರೈತರು ತಾವೇ ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ಗ್ರಾಹಕರಿಗೆ ಮಾರಾಟ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ.
ವಿಶಿಷ್ಟ ಖಾದ್ಯಗಳು : ಮಲೆನಾಡಿನ ವಿಶಿಷ್ಟ ಸಿಹಿ ಖಾದ್ಯಗಳಾದ ತೊಡೆದೇವು, ಅಪ್ಪೆಮಿಡಿ, ಹಲಸು, ಬಾಳೆ, ಅನಾನಸ್, ಅಂಜೂರ, ಗೇರು, ಮುರುಗಲು, ಪುನರ್ಪುಳಿ ಇತ್ಯಾದಿಗಳ ಮೌಲ್ಯವರ್ಧಿತ ಉತ್ಪನ್ನಗಳೊಂದಿಗೆ ಸಿರಿಧಾನ್ಯಗಳ ಉತ್ಪನ್ನಗಳು ಮತ್ತು ಸ್ಥಳೀಯ ವಿಶಿಷ್ಟ ಖಾದ್ಯಗಳು, ಜೇನುತುಪ್ಪದ ಮೌಲ್ಯವರ್ಧಿತ ಉತ್ಪನ್ನಗಳು ಮತ್ತು ಈ ಮೇಳದ ಅಂಗವಾಗಿ ಬೇಸಿಗೆಯ ಸವಿರುಚಿಗಳಾದ ದಾವಣಗೆರೆ ಬೆಣ್ಣೆದೋಸೆ, ಹುಬ್ಬಳ್ಳಿ ಮಿರ್ಚಿ ಮಂಡಕ್ಕಿ, ಆಲೂ ಟ್ವಿಸ್ಟರ್ ಇತ್ಯಾದಿ ಖಾದ್ಯಗಳು ಈ ಮೇಳದ ಪ್ರಮುಖ ಆಕರ್ಷಣೆಗಳಾಗಿವೆ.
8 ಲಕ್ಷ ಸಸಿಗಳು ಲಭ್ಯ : ಕರಿಮೆಣಸು, ಕೋಕಂ, ಏಲಕ್ಕಿ, ದಾಲ್ಚಿನಿ, ಬಿದಿರು, ಕಾಫಿ, ಪುನರ್ಪುಳಿ, ಗೋಡಂಬಿ ಸೇರಿದಂತೆ ವಿವಿಧ ತಳಿಯ 8 ಲಕ್ಷ ಸಸಿಗಳು ರಿಯಾಯ್ತಿ ದರದಲ್ಲಿ ಮಾರಾಟಕ್ಕೆ ಲಭ್ಯವಿದೆ. ಹಣ್ಣುಗಳ ಉತ್ಪನ್ನಗಳಾದ ಜ್ಯೂಸ್, ಜ್ಯಾಮ್, ಜೇನು, ಇತರೆ ಉತ್ಪನ್ನಗಳು, ಸಿರಿಧಾನ್ಯದ ತೊಡೆದೇವು ಈ ರೀತಿಯ ಖಾದ್ಯಗಳು ಲಭ್ಯವಿರುತ್ತವೆ.
ಈ ಮೇಳದಲ್ಲಿ ಹಣ್ಣಿನ ಸಸಿಗಳ ನರ್ಸರಿ, ಅಲಂಕಾರಿಕ ಗಿಡಗಳು, ತರಕಾರಿ ಮತ್ತು ಹೂವಿನ ಬೀಜಗಳು, ತಾರಸಿ / ಕೈತೋಟದ ಪರಿಕರಗಳ ಮಾರಾಟ ಮಳಿಗೆಗಳು, ಅಲಂಕಾರಿಕ ಮೀನುಗಳು, ಬಾಳೆಯ ನಾರು, ಬಿದರಿನ ನಾರು ಮತ್ತು ಮಣ್ಣಿನಿಂದ ತಯಾರಿಸಿದ ಹಲವು ಸ್ವಸಹಾಯ ಸಂಘಗಳ ಕರಕುಶಲ ವಸ್ತು ಪ್ರದರ್ಶನ ಮತ್ತು ಮಾರಾಟವಿರುತ್ತದೆ.
150 ಮಳಿಗೆ ಸ್ಥಾಪನೆ : 150 ಕ್ಕೂ ಹೆಚ್ಚಿನ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದ್ದು, ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಉತ್ತಮ ಗುಣಮಟ್ಟದ, ರುಚಿಕರ ಹಣ್ಣು ಹಾಗೂ ರೈತರಿಗೆ, ಸ್ವಸಹಾಯ ಗುಂಪುಗಳಿಗೆ, ಉದ್ದಿಮೆದಾರರಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವುದು ಈ ಮೇಳದ ಉದ್ದೇಶವಾಗಿದೆ. ಮುಖ್ಯವಾಗಿ ಈ ಮೇಳವು ರೈತರು, ವ್ಯಾಪಾರಿಗಳು, ರಫ್ತುದಾರರು, ಸರ್ಕಾರಿ ಅಧಿಕಾರಿಗಳು ಮತ್ತು ಇನ್ನಿತರ ಸಂಸ್ಥೆಗಳ ಮುಖ್ಯಸ್ಥರನ್ನು ಭೇಟಿ ಆಗಲು, ಸಂಪರ್ಕ ಹೊಂದಲು ಒಳ್ಳೆಯ ವೇದಿಕೆ ಆಗಲಿದೆ.
ಅಲ್ಲದೆ, ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ಆವರಣದ ಪ್ರಾತ್ಯಕ್ಷಿಕೆಯ ತಾಕುಗಳಾದ ಸಮಗ್ರ ಕೃಷಿ ಪದ್ಧತಿ. ಜೇನು ಸಾಕಾಣಿಕೆ ಘಟಕ, ಕುರಿ ಮತ್ತು ಕೋಳಿ ಸಾಕಾಣಿಕೆ ಘಟಕ, ಜಲ ಕೃಷಿ (ಹೈಡೋಫೋನಿಕ್ಸ್), ಎರೆಹುಳು ಗೊಬ್ಬರ ತಯಾರಿಕೆ ಘಟಕ, ಕೊಳವೆ ಬಾವಿ ಜಲ ಮರುಪೂರಣ ಮಾದರಿ, ತಾರಸಿ ತೋಟ, ಅಲಂಕಾರಿಕ ಮೀನು ಘಟಕಗಳನ್ನು ಸಂದರ್ಶಿಸಿ, ಮಾಹಿತಿ ಪಡೆಯುವಂತೆ ಕರೆ ನೀಡುತ್ತಾ, ರೈತರು, ರೈತಮಹಿಳೆಯರು, ಯುವ ವ್ಯವಸಾಯಗಾರರು, ಉದ್ದಿಮೆದಾರರು, ಗ್ರಾಹಕರು, ವಿದ್ಯಾರ್ಥಿಗಳು, ಯುವಕರು, ಪೋಷಕರು ಹಾಗೂ ಮಕ್ಕಳು ಸೇರಿದಂತೆ ಎಲ್ಲಾ ವರ್ಗದ ಜನರು ಭಾಗವಹಿಸಿ, ಉತ್ಪನ್ನಗಳನ್ನು ಖರೀದಿಸಿ, ಸ್ವಾದಿಸಿ, ಆನಂದಿಸಿ ಈ ಮೇಳವನ್ನು ಯಶಸ್ವಿಗೊಳಿಸಬೇಕೆಂದು ಕೋರಿಕೊಳ್ಳುತ್ತೇವೆ.
ಈ ರಜತ ಮಹೋತ್ಸವದ ಅಂಗವಾಗಿ ತಾಂತ್ರಿಕ ಸಮಾವೇಶಗಳು, ಮಕ್ಕಳಿಗೆ, ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ವಿಜೇತರಿಗೆ ಆಕರ್ಷಕ ಬಹುಮಾನವನ್ನು ಮತ್ತು ಭಾಗವಹಿಸಿದವರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಗುವುದು.
ತಾಂತ್ರಿಕ ಸಮಾವೇಶಗಳ ಆಯೋಜನೆ : ಏ.26 ರಂದು ವೈಜ್ಞಾನಿಕ ಜೇನು ಸಾಕಾಣಿಕೆ ಮತ್ತು ಜೇನಿನ ಮೌಲ್ಯವರ್ಧನೆ, ಜೇನು ವಿಷ ಬಳಕೆ, ನಸುರು ಜೇನು ಸಾಕಾಣಿಕೆ ಕುರಿತು ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ರಫ್ತು ಅವಕಾಶಗಳು, ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಏ. 27 ರಂದು ತಾರಸಿ ತೋಟ ಮತ್ತು ತ್ಯಾಜ್ಯ ವಸ್ತು ನಿರ್ವಹಣೆ, ಬೋನ್ಸಾಯ್ ಕೃಷಿ ವೈಶಿಷ್ಟ್ಯಗಳು, ರೈತ ಉತ್ಪಾದಕ ಸಂಘಗಳ ಒಕ್ಕೂಟ, ರೈತ ಉತ್ಪಾದಕ ಸಂಘಗಳ ರಚನೆ ಮತ್ತು ಭವಿಷ್ಯದ ನಿರೀಕ್ಷೆಗಳು ಹಾಗೂ ಏ.28 ರಂದು ಗೋಡಂಬಿ ಬೆಳೆಯ ಉತ್ಪಾದನೆ ಮತ್ತು ಸಂಸ್ಕರಣೆ, ಕೋಕೊ ಬೆಳೆಯ ಉತ್ಪಾದನೆ, ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಕುರಿತು ತಾಂತ್ರಿಕ ಸಮಾವೇಶ ಆಯೋಜಿಸಲಾಗಿದೆ.
ವಿದ್ಯಾರ್ಥಿಗಳಿಗೆ ಸ್ಪಧೆಗಳು ; 6 ರಿಂದ 10 ವರ್ಷದ ವಿದ್ಯಾರ್ಥಿಗಳಿಗೆ ಪ್ರಕೃತಿ ಕುರಿತು, 11 ರಿಂದ 13 ವರ್ಷದವರಿಗೆ ಜಾಗತಿಕ ತಾಪಮಾನ, 14 ರಿಂದ 16 ವರ್ಷದವರಿಗೆ ಉತ್ತಮ ಆರೋಗ್ಯಕ್ಕಾಗಿ ಹಣ್ಣು ಮತ್ತು ತರಕಾರಿಗಳ ಪ್ರಾಮುಖ್ಯತೆ ಕುರಿತಾದ ಚಿತ್ರ ಬಿಡಿಸುವ ಸ್ಪರ್ಧೆಗಳನ್ನು ನವಿಲೆಯ ಕೃಷಿ ಕಾಲೇಜಿನ ಡಾ. ಸ್ವಾಮಿನಾಥನ್ ಸಭಾಂಗಣದಲ್ಲಿ ಬೆಳಿಗ್ಗೆ 11 ರಿಂದ 1.30 ರವರೆಗೆ ಏರ್ಪಡಿಸಲಾಗಿದ್ದು ಚಿತ್ರ ಬಿಡಿಸುವ ಪೇಪರ್ ಇತರೆ ಸಾಮಗ್ರಿಗಳನ್ನು ಸ್ಪರ್ಧಿಗಳು ತರಬೇಕು.
ಪಾಕ ಸ್ಪರ್ಧೆ : ಹಣ್ಣಿನ ಖಾದ್ಯಗಳ ಕುರಿತು ಸ್ಪರ್ಧೆ ನಡೆಯಲಿದ್ದು ಏ.26 ರಂದು ನವಿಲೆ ಕೃಷಿ ಕಾಲೇಜಿನ ನಾರ್ಮನ್ ಬೋರ್ಲಾಂಗ್ ಬಿಲ್ಡಿಂಗ್ ಹಿಂಭಾಗದಲ್ಲಿ ಬೆಳಿಗ್ಗೆ 11 ರಿಂದ ನಡೆಯಲಿದ್ದು ಸ್ಪರ್ಧಾಳುಗಳು ಮನೆಯಲ್ಲಿಯೇ ಖಾದ್ಯಗಳನ್ನು ತಯಾರಿಸಿ ತಂದು ಪ್ರದರ್ಶಿಸಬೇಕು.
ಸಾಂಸ್ಕೃತಿಕ ಕಾರ್ಯಕ್ರಮ : ರಜತ ಮಹೋತ್ಸವ ಅಂಗವಾಗಿ ಪ್ರತಿ ದಿನ ಸಂಜೆ ಕೃಷಿ ಕಾಲೇಜಿನಲ್ಲಿ 6 ರಿಂದ 8.30 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಈ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹೊಂಗಿರಣ, ಶಿವಮೊಗ್ಗ, ಶ್ರೀ ಅಂಬೇಡ್ಕರ್ ಜಾನಪದ ಕಲಾ ಸಂಘ, ಭದ್ರಾವತಿ ಹಾಗೂ ಕೃಷಿ ಮಹಾವಿದ್ಯಾಲಯ ಮತ್ತು ಇರುವಕ್ಕಿ ವಿದ್ಯಾರ್ಥಿ ತಂಡದವರು ನಡೆಸಿಕೊಡುವರು.
ರೈತರು, ನಾಗರೀಕರು, ವಿದ್ಯಾರ್ಥಿಗಳು, ಸ್ವ ಸಹಾಯ ಗುಂಪಿನ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಮೇಳವನ್ನು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಕುಲಸಚಿವರಾದ ಡಾ.ಕೆ.ಸಿ.ಶಶಿಧರ್ ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಡಿ.ತಿಪ್ಪೇಶ, ಸಹ ಸಂಶೋಧನಾ ನಿರ್ದೇಶಕ ಡಾ.ಪ್ರದೀಪ್ ಪಾಲ್ಗೊಂಡಿದ್ದರು.