ಶಿವಮೊಗ್ಗ: ನಿನ್ನೆ ಭಾರೀ ಮಳೆಯ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಿ ಡಿಸಿ ಆದೇಶಿಸಿದ್ದರು. ಇಂದು ಕೂಡ ಜಿಲ್ಲೆಯ ಸಾಗರ, ಹೊಸನಗರ, ತೀರ್ಥಹಳ್ಳಿ ಹಾಗೂ ಸೊರಬ ತಾಲ್ಲೂಕಿನಲ್ಲಿ ಭಾರೀ ಮಳೆಯಾಗುವ ಕಾರಣ, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಈ ಕುರಿತಂತೆ ಸಾಗರ ತಹಶೀಲ್ದಾರ್ ಅವರು ಆದೇಶ ಹೊರಡಿಸಿದ್ದು, ಸಾಗರ ತಾಲೂಕಿನಾದ್ಯಂತ ಮಳೆಯ ಪ್ರಮಾಣ ಹೆಚ್ಚುತ್ತಿದ್ದು ಶಾಲಾ ಮಕ್ಕಳ ಹಿತದೃಷ್ಟಿಯಿಂದ ದಿನಾಂಕ 18-07-2024ರ ಗುರುವಾರದ ಇಂದು ಎಲ್ಲಾ ಪ್ರಾಥಮಿಕ ಶಾಲೆ,ಪ್ರೌಢಶಾಲೆ,ಪದವಿ ಪೂರ್ವ ಕಾಲೇಜು ಮತ್ತು ಅಂಗನವಾಡಿ ಕೇಂದ್ರಗಳಿಗೆ ರಜೆಯನ್ನು ಘೋಷಿಸಲಾಗಿದೆ. ಮಕ್ಕಳ ಬಗ್ಗೆ ಜಾಗ್ರತೆ ವಹಿಸಲು ಪಾಲಕರಲ್ಲಿ ವಿನಂತಿಸಿದ್ದಾರೆ.
ಸೊರಬ ತಾಲ್ಲೂಕಿನ ತಹಶೀಲ್ದಾರ್ ಗ್ರೇಡ್-2 ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ತಾಲೂಕು ದಂಡಾಧಿಕಾರಿಗಳು ಹಾಗೂ ತಾಲೂಕು ತಹಶೀಲ್ದಾರ್ ಸೊರಬ ಅವರ ಆದೇಶದಂತೆ ಸೊರಬ ತಾಲೂಕಿನ ವ್ಯಾಪ್ತಿಯಲ್ಲಿ ವಿಪರೀತ ಮಳೆಯಾಗುತ್ತಿರುವ ಪ್ರಯುಕ್ತ ದಿನಾಂಕ 18/07/2024 ರ ಗುರುವಾರದ ಇಂದು ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರ ಗಳಿಗೆ ಮತ್ತು ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿರುತ್ತದೆ ಅಂತ ತಿಳಿಸಿದ್ದಾರೆ.
ತೀರ್ಥಹಳ್ಳಿ ತಾಲ್ಲೂಕಿನ ತಹಶೀಲ್ದಾರ್ ಜಕ್ಕಣ್ಣ ಗೌಡರ್ ಅವರು ಆದೇಶ ಹೊರಡಿಸಿದ್ದು, ತಾಲ್ಲೂಕಿನಲ್ಲಿ ಇಂದು ಕೂಡ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಜುಲೈ.18ರ ಇಂದು ತೀರ್ಥಹಳ್ಳಿ ತಾಲ್ಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿರುವುದಾಗಿ ತಿಳಿಸಿದ್ದಾರೆ.
ಇನ್ನೂ ಹೊಸನಗರ ತಾಲ್ಲೂಕಿನಲ್ಲಿಯೂ ಇಂದು ಮಳೆ ಮುಂದುವರೆಯು ಕಾರಣ, ತಹಶೀಲ್ದಾರ್ ರಶ್ಮೀ ಹಾಲೇಶ್ ಅವರು, ಜುಲೈ.18ರ ಇಂದು ಶಾಲಾ-ಕಾಲೇಜುಗಳಿಗೆ ರಜೆಯನ್ನು ಘೋಷಿಸಿದ್ದಾರೆ.
ಒಟ್ಟಾರೆಯಾಗಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಸಾಗರ, ಸೊರಬ ಹಾಗೂ ಹೊಸನಗರ ತಾಲ್ಲೂಕಿನ ಭಾರೀ ಮಳೆಯಾಗುವ ಮುನ್ಸೂಚನೆಯ ಕಾರಣ ಇಂದು ಶಾಲಾ-ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು