ಶಿವಮೊಗ್ಗ: ಜಿಲ್ಲೆಯಲ್ಲಿ ಬೆಳ್ಳಂಬೆಳಿಗ್ಗೆ ಬೆಚ್ಚಿ ಬೀಳಿಸುವಂತ ಘಟನೆಯೊಂದು ನಡೆದಿದೆ. ಪತಿಯೊಬ್ಬ ತನ್ನ ಪತ್ನಿಯನ್ನು ಕಂದ್ಲಿಯಿಂದ ಕೊಚ್ಚಿ ಕೊಲೆ ಗೈದಿರುವಂತ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ನಗರದ ರಾಘವೇಂದ್ರ ಬಡಾವಣೆಯಲ್ಲೇ ಇಂತದ್ದೊಂದು ಬೆಚ್ಚಿ ಬೀಳಿಸುವಂತ ಘಟನೆ ನಡೆದಿರೋದು. ನಾಗರಾಜ್ ಎಂಬಾತ ತನ್ನ ಪತ್ನಿ ರೇಣುಕಾ(40) ಎಂಬಾಕೆಯನ್ನು ಬೆಳ್ಳಂಬೆಳಿಗ್ಗೆ ಕಂದ್ಲಿ ಬೀಸಿ ಕೊಲೆ ಮಾಡಿದ್ದಾನೆ.
ಕುಟುಂಬಸ್ಥರ ಮಾಹಿತಿ ಪ್ರಕಾರ ಅನೈತಿಕ ಸಂಬಂಧದ ಕಾರಣ ನಾಗರಾಜ್ ಹಾಗೂ ರೇಣುಕಾ ನಡುವೆ ನಿನ್ನೆ ಇಡೀ ರಾತ್ರಿ ಜಗಳವಾಗಿದೆ. ಈ ಜಗಳ ತಾರಕಕ್ಕೇರಿ ಮುಂಜಾನೆ 4 ಗಂಟೆಯ ಸುಮಾರಿಗೆ ಪತ್ನಿ ರೇಣುಕಾನನ್ನು ಕಂದ್ಲಿಯಿಂದ ಕೊಚ್ಚಿ ನಾಗರಾಜ್ ಕೊಲೆಗೈದಿರುವುದಾಗಿ ಹೇಳಲಾಗುತ್ತಿದೆ.
ಈ ವಿಷಯ ತಿಳಿದು ಸ್ಥಳಕ್ಕೆ ಶಿಕಾರಿಪುರ ಟೌನ್ ಠಾಣೆಯ ಪೊಲೀಸರು ತೆರಳಿ, ಆರೋಪಿ ನಾಗರಾಜ್ ನನ್ನು ಬಂಧಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಅಂದಹಾಗೇ ನಾಗರಾಜ್ ಪ್ಯಾಸೆಂಜರ್ ಆಟೋ ಓಡಿಸಿ ಜೀವನ ನಿರ್ವಹಣೆ ಮಾಡುತ್ತಿದ್ದರು ಎನ್ನಲಾಗಿದೆ. ಪತ್ನಿಯನ್ನು ಹತ್ಯೆಗೈದ ಬಗ್ಗೆ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.