ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಕೋಡ್ಲು ಗ್ರಾಮದಲ್ಲಿ 11 ದಿನಗಳ ಹಿಂದೆ ಪೊಲೀಸ್ ಬಿಗಿ ಭದ್ರತೆಯಲ್ಲಿ ಆರಂಭಗೊಂಡ ಜಲ್ ಜೀವನ್ ಮಿಷನ್‌ನ ನೀರು ಶುದ್ಧೀಕರಣ ಘಟಕ (WTP)ದ ಕಾಮಗಾರಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಗುರುವಾರ ಹೊಸ ಸ್ವರೂಪಕ್ಕೆ ತಿರುಗಿದೆ.
“ಜನರ ಸಲಹೆಗಳಿಗೆ ಬೆಲೆ ನೀಡದೆ, ಜನಾಭಿಪ್ರಾಯಯವನ್ನು ಪೊಲೀಸರ ಮೂಲಕ ಹತ್ತಿಕ್ಕಿದ ಸರಕಾರ ನೀರಿನ ಶುದ್ಧೀಕರಣ ಘಟಕದ ಕಾಮಗಾರಿಗೆ ಚಾಲನೆ ನೀಡಿ 11 ದಿನಗಳ ತುಂಬಿದೆ. ಹೀಗಾಗಿ, ಶಿವರಾತ್ರಿಯ ಮುನ್ನಾದಿನಾಗಿರುವ ಇವತ್ತು ಜನರ ಆಶಯಗಳ ಸಾವಿನ ಸಾಂಕೇತಿಕವಾಗಿ ಪ್ರತಿಭಟನಾ ಸ್ಥಳದಲ್ಲಿ ತಿಥಿಯನ್ನು ಆಚರಿಸಲಾಯಿತು,’’ ಎಂದು ಪ್ರತಿಭಟನೆಯ ಹೊಣೆ ಹೊತ್ತಿರುವ ಭೀಮೇಶ್ವರ ಸಂಗಮ ಉಳಿಸಿ ಹೋರಾಟ ಸಮಿತಿ ಹಾಗೂ ತಾಲೂಕು ರೈತ ಸಂಘ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿವೆ.
ತೀರ್ಥಹಳ್ಳಿ- ಶೃಂಗೇರಿ ಸಂಪರ್ಕಿಸುವ ಹೆದ್ದಾರಿಯಲ್ಲಿ ಬರುವ ಕೋಡ್ಲು ಗ್ರಾಮದಲ್ಲಿ ಗ್ರಾಮಸ್ಥರು ತಮಗೆ ತೋಚಿದ ರೀತಿಯಲ್ಲಿ ಸರಕಾರದ ಕಾಮಗಾರಿಗೆ ಅಪರ ಕರ್ಮಗಳನ್ನು ನೆರವೇರಿಸಿದ್ದಾರೆ. ಬಾಳೆ ಎಲೆಯ ಮೇಲೆ ಕಾಮಗಾರಿಯ ಲಂಚದ ಸಂಕೇತವಾಗಿ ಹಣದ ನೋಟುಗಳು, ಜತೆಗೆ, ಮೊಟ್ಟೆ, ಮಾಂಸ, ಮದ್ಯವನ್ನು ಎಡೆಯ ರೂಪದಲ್ಲಿ ಇಡುವ ಮೂಲಕ ಕಾಮಗಾರಿಯನ್ನು ಲೇವಡಿ ಮಾಡಿದ್ಧಾರೆ.
“ಎಡೆ ಇಡುವ ಸಮಯದಲ್ಲಿ ರೈತರು ಬಾಯಿ ಬಡಿದುಕೊಳ್ಳುತ್ತಾ, ಹೊಗಳಿಕೆಯ ವಿಡಂಬನೆಯ ಮೂಲಕ ಭ್ರಷ್ಟ ವ್ಯವಸ್ಥೆಗೆ ಶಾಂತಿಯುತವಾಗಿ ಅರ್ಥೈಸುವ ಕೆಲಸ ಮಾಡಿದ್ದೇವೆ. ಈಗಲೂ ಕಾಲ ಮಿಂಚಿಲ್ಲ. ಕುಡಿಯುವ ನೀರಿನ ವಿಚಾರದಲ್ಲಿ ಸರಕಾರ ಹುಡುಗಾಟಿಕೆ ತೋರಿಸಬಾರದು,’’ ಎಂದು ರೈತ ನಾಯಕರು ಈ ಸಮಯದಲ್ಲಿ ಹಿತವಚನವನ್ನು ನೀಡಿದ್ದಾರೆ.
“ಸಾಂಕೇತಿಕವಾಗಿ ತಿಥಿ ನೆರವೇರಿಸುವ ಮೂಲಕ ಜನ ವಿರೋಧಿ ಸರಕಾರದ ಸಾವಿನ ಸೂತಕವನ್ನೂ ಕಳೆದುಕೊಂಡಿದ್ದೇವೆ. ನಾಳೆಯಿಂದ ಹೋರಾಟ ಹೊಸ ಹಾದಿಯಲ್ಲಿ ಕ್ರಮಿಸಲಿದೆ. ಅಂತಿಮವಾಗಿ ತಾಲೂಕಿನ ಪ್ರತಿಮನೆಗೂ ವೈಜ್ಞಾನಿಕವಾಗಿ ಕುಡಿಯುವ ನೀರು ತಲುಪುವವರೆಗೂ ಹೋರಾಟ ನಿಲ್ಲುವುದಿಲ್ಲ,’’ ಎಂದು ಇದೇ ಸಮಯದಲ್ಲಿ ಸಮಿತಿ ಹಾಗೂ ರೈತ ಸಂಘದ ತಾಲೂಕು ಘಟಕ ತಿಳಿಸಿದೆ.
ಬೆಂಗಳೂರಿನ ‘ರಾಮೇಶ್ವರಂ ಕೆಫೆ ರೀ-ಓಪನ್’ಗೆ ಮುಹೂರ್ತ ಫಿಕ್ಸ್: ನಾಳೆ ‘ಶಿವರಾತ್ರಿ ಹಬ್ಬ’ದಂದೇ ಓಪನ್
‘ರಾಜ್ಯ ಸರ್ಕಾರ’ದಿಂದ ‘11,307 ಪೌರಕಾರ್ಮಿಕ’ರ ‘ಖಾಯಂ’ ಕುರಿತಂತೆ ಮಹತ್ವದ ಆದೇಶ