ಶಿವಮೊಗ್ಗ: ಹಾವೇರಿಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ಕನ್ನಡ ನ್ಯೂಸ್ ಇ-ಪೇಪರ್ ಸಂಪಾದಕರ ವಿರುದ್ಧ ಸುಮೋಟೋ ಕೇಸ್ ದಾಖಲಿಸಲಾಗಿತ್ತು. ಈ ಪ್ರಕರಣವನ್ನು ಹಿಂಪಡೆಯುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ, ಸಾಗರ ತಾಲ್ಲೂಕು ಶಾಖೆಯಿಂದ ಡಿವೈಎಸ್ಪಿ ಮೂಲಕ ಗೃಹಸಚಿವರಿಗೆ ಮನವಿ ಮಾಡಲಾಯಿತು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯಕ್ ಅವರನ್ನು ಭೇಟಿ ಮಾಡಿದಂತ ಸಾಗರ ತಾಲ್ಲೂಕು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಶಾಖೆಯ ಸದಸ್ಯರು, ನಮ್ಮ ಸಂಘದ ಸಕ್ರೀಯ ಸದಸ್ಯ, ಕನ್ನಡ ನ್ಯೂಸ್ ಇ-ಪೇಪರ್ ಸಂಪಾದಕ ವಸಂತ ಅವರ ಮೇಲೆ ಹಾವೇರಿಯ ಸಿಇಎನ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಿಸಲಾಗಿದೆ. ಕನ್ನಡ ನ್ಯೂಸ್ ಇ-ಪೇಪರ್ ನಲ್ಲಿ ಮೃತ ರೈತನ ಸಂಬಂಧಿಕರು ನೀಡಿದಂತ ಹೇಳಿಕೆಯನ್ನು, ನೀಡಿದ ಮನವಿ ಆಧರಿಸಿ ಸುದ್ದಿಯನ್ನು ಪ್ರಕಟಿಸಲಾಗಿದೆ. ಈ ಕೂಡಲೇ ನಮ್ಮ ಸಂಘದ ಸದಸ್ಯ ವಸಂತ ಮೇಲಿನ ಪ್ರಕರಣವನ್ನು ತಕ್ಷಣವೇ ಹಿಂಪಡೆಯುವಂತೆ ಮನವಿಯ ಮೂಲಕ ಒತ್ತಾಯಿಸಲಾಯಿತು.
ಈ ವೇಳೆ ಮಾತನಾಡಿದಂತ ಸಾಗರ ತಾಲ್ಲೂಕು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಮಹೇಶ್ ಹೆಗಡೆ ಅವರು, ಹಾವೇರಿ ಜಿಲ್ಲಾ ಪೊಲೀಸರು ನಮ್ಮ ಸಂಘದ ಸದಸ್ಯ ವಸಂತ್ ಮೇಲೆ ಏನು ಸುಮೋಟೋ ಕೇಸ್ ದಾಖಲಿಸಿದ್ದಾರೆ. ಅದನ್ನು ಹಿಂಪಡೆಯಬೇಕು. ಏಕೆಂದರೇ ಪತ್ರಕರ್ತರ ಸ್ವಾತಂತ್ರ್ಯಕ್ಕೆ ಯಾವತ್ತೂ ಧಕ್ಕೆ ಮಾಡಬಾರದು. ಪತ್ರಕರ್ತರಿಗೆ ಸುದ್ದಿ ಬರೆಯೋದಕ್ಕೆ ಬಿತ್ತರಿಸೋದಕ್ಕೆ ಯಾವತ್ತೂ ಸ್ವಾತಂತ್ರ್ಯ ಇರುತ್ತದೆ ಎಂದರು.
ಪತ್ರಕರ್ತರ ಬಗ್ಗೆ ಸುಮೋಟೋ ಕೇಸ್ ದಾಖಲಿಸೋ ಮುನ್ನ ಪತ್ರಕರ್ತರಿಗೆ, ಪತ್ರಕರ್ತರ ಸಂಘಕ್ಕೆ ವಿಷಯವನ್ನು ತಿಳಿಸಿ, ಆ ದೃಷ್ಠಿಯಲ್ಲಿ ಮುಂದಿನ ದಿನಗಳಲ್ಲಿ ಪೊಲೀಸರು ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಮುಂದುವರೆಯುವಂತೆ ಪೊಲೀಸರಿಗೆ ಮನವಿ ನೀಡಲಾಗುತ್ತಿದೆ ಎಂದರು.
ಈ ಬಳಿಕ ಮಾತನಾಡಿದಂತ ಶಿವಮೊಗ್ಗ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ದೀಪಕ್ ಸಾಗರ್ ಮಾತನಾಡಿ, ಯಾವುದೇ ಒಂದು ಘಟನೆ ಸಂಭವಿಸಿದಾಗ ಮನವಿ ಕೊಡುವಂತದ್ದು ಸಹಜವಾದ ಪ್ರಕ್ರಿಯೆ. ನಾವು ಯಾವುದೇ ಪೂರ್ವಗ್ರಹ ಪೀಡಿತರಾಗಿ ಹಾಕಿರೋದಿಲ್ಲ. ಅವರು ಏನು ಮನವಿ ಕೊಡ್ತಾರೋ ಅದನ್ನ ಹಾಕ್ತೀವಿ. ಸತ್ಯಾಸತ್ಯತೆಯನ್ನು ನೋಡಬೇಕಾದಂತ ಇಲಾಖೆಗಳಿವೆ ಎಂದು ಹೇಳಿದರು.
ಹಾವೇರಿ ರೈತನ ಆತ್ಮಹತ್ಯೆ ಬಗ್ಗೆ ರೈತರು ಕೊಟ್ಟಿರುವಂತ ಮನವಿಯನ್ನು ನಮ್ಮ ಸಂಘದ ಸದಸ್ಯರು ದಾಖಲಿಸಿದಾಗ ಪೊಲೀಸ್ ಇಲಾಖೆಯಿಂದ ಸುಮೋಟೋ ಕೇಸ್ ದಾಖಲಿಸಲಾಗಿದೆ. ದಯಮಾಡಿ ಇದು ಆಗಬಾರದು. ನಿಮಗೆ ಎಲ್ಲಾ ಪತ್ರಕರ್ತರು ಗೊತ್ತಿರುತ್ತದೆ. ಘಟನೆ ಏನೆಂಬುದು ನಿಮಗೆ ಗೊತ್ತಿರುತ್ತದೆ. ಒಮ್ಮೆ ನಮ್ಮಿಂದ ಏನಾದರೂ ತಪ್ಪಾಗಿದ್ದರೇ ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡೋರು ನಾವು, ನಮ್ಮನ್ನು ಕರೆಸಿ ಮಾತನಾಡಿ. ಸಂಘಟನೆಯನ್ನು ಕರೆಸಿ ಮಾತನಾಡಿ, ಆ ತರದ್ದು ಏನಾದರೂ ಇದ್ದರೇ ನಮ್ಮನ್ನು ಕೇಳಿ ಎಂದರು.
ಸಂವಿಧಾನದ ಆಶಯದಲ್ಲಿ ಯಾರು ತಪ್ಪು ಮಾಡಿದ್ದರೂ ತಪ್ಪೇ. ಅದರಲ್ಲಿ ಪತ್ರಕರ್ತರಿಗೆ ಅಂತ ವಿಶೇಷವಾದದ್ದೇನು ಇಲ್ಲ. ಯಾವುದೋ ಘಟನೆ ಬಗ್ಗೆ ಮನವಿಯನ್ನು ಕೊಟ್ಟಿರುತ್ತಾರೋ ಅದನ್ನು ವರದಿ ಮಾಡಿರುತ್ತೇವೆ. ಅದನ್ನು ದಯಮಾಡಿ ತಾವು ಗಮನಿಸಬೇಕು. ಇಂತಹ ಪ್ರಕರಣಗಳು ಮತ್ತೆ ಆಗಬಾರದು. ಪತ್ರಕರ್ತರ ಹಕ್ಕು ಏನಿದೆ ಅದನ್ನು ಯಾವತ್ತೂ ಕಸಿಯುವಂತ ಕೆಲಸ ಯಾವತ್ತೂ ಆಗಬಾರದು ಎಂದು ಹೇಳಿದರು.
ಈ ವೇಳೆ ಸಾಗರ ತಾಲ್ಲೂಕು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಜಿ.ನಾಗೇಶ್, ಸದಸ್ಯರಾದಂತ ಉಮೇಶ್ ಮೊಗವೀರ, ಜಮೀಲ್ ಸಾಗರ್, ರಫೀಕ್ ಕೂಪ್ಪ, ಲೋಕೇಶ್ ಗುಡಿಗಾರ್, ವಸಂತ ಬಿ ಈಶ್ವರಗೆರೆ, ನಾಗರಾಜ್, ಗಿರೀಶ್ ರಾಯ್ಕರ್, ರಾಘವನ್, ವಿ.ಶಂಕರ್, ವಸಂತ್ ತ್ಯಾಗರ್ತಿ ಹಾಜರಿದ್ದರು.