ಶಿವಮೊಗ್ಗ: ಜಿಲ್ಲೆಯ ಸೊರಬದ ಹಳೇಸೊರಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 49 ವಸಂತಗಳನ್ನು ಪೂರೈಸಿದ್ದು, ಮುಂದಿನ ವರ್ಷದಲ್ಲಿ 50 ನೇ ವರ್ಷದ ಸಂಭ್ರಮಾಚರಣೆಯನ್ನು ಅದ್ದೂರಿಯಾಗಿ ನಡೆಸಲು ಸಹಕಾರಿ ಬಂಧುಗಳು ಸಹಕಾರ ನೀಡಬೇಕು ಎಂದು ಹಳೇಸೊರಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜೆ. ಪ್ರಕಾಶ್ ಹೇಳಿದರು.
ಸೋಮವಾರ ಪಟ್ಟಣದ ಗಿರಿಜಾ ಶಂಕರ ಭವನದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕಿನ ಹಳೇಸೊರಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದಂತ ಅವರು, ಸುದೀರ್ಘ ಅವಧಿಗೆ ಸಹಕಾರ ಸಂಘವು ರೈತ ಪರವಾಗಿ ಕಾರ್ಯ ನಿರ್ವಹಿಸಲು ಮಾಜಿ ಅಧ್ಯಕ್ಷರು,ನಿರ್ದೇಶಕರು ಹಾಗೂ ರೈತರು ಸಹಕಾರ ನೀಡಿದ್ದಾರೆ. ಪ್ರಸ್ತುತ ವರ್ಷದಲ್ಲಿ ಸಂಘವು ಒಟ್ಟು 7.26 ಲಕ್ಷ ರೂಪಾಯಿ ನಿವ್ವಳ ಲಾಭ ಗಳಿಸಿದೆ ಎಂದರು.
ಸರ್ಕಾರದಿಂದ ಸಹಕಾರಿ ಸಂಘಕ್ಕೆ ಹಣಕಾಸಿನ ನೆರವು ಸಿಕ್ಕಿಲ್ಲ. ಅದರಿಂದ ಸಾಲವನ್ನು ಹೆಚ್ಚುವರಿಯಾಗಿ ನೀಡಲು ಅವಕಾಶವಿಲ್ಲ. ನೀಡಿರುವ ಸಾಲವನ್ನು ರೈತರು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದರೆ ಅದು ಸಂಘದಲ್ಲಿ ಬಂಡವಾಳವಾಗಿ ಪರಿವರ್ತನೆಯಾಗಲಿದೆ. ಬಂಡವಾಳವನ್ನು ಸ್ವಂತವಾಗಿ ಮಾಡಿಕೊಂಡು ಸಂಘದಲ್ಲಿ ಅಗತ್ಯವಿರುವವರೆಗೆ ಸಾಲ ನೀಡಬೇಕಾಗಿದೆ. ಸಚಿವ ಮಧು ಬಂಗಾರಪ್ಪ ಅವರ ಮೂಲಕ ಒತ್ತಡ ತಂದು ಸರ್ಕಾರದಿಂದ ಹೆಚ್ಚುವರಿ ಸಾಲ ನೀಡಲು ಶ್ರಮಿಸಲಾಗುವುದು ಎಂದರು.
ರೈತರು ತಮ್ಮ ಕೃಷಿ ಉತ್ಪಾದನೆಯಲ್ಲಿ ಬಂದ ಲಾಭವದಲ್ಲಿ ಅಲ್ಪಸ್ವಲ್ಪ ಹಣವನ್ನು ನಮ್ಮ ಸಂಘದಲ್ಲಿ ಹೂಡಿಕೆ ಮಾಡಿದರೆ ಬ್ಯಾಂಕ್ ನಲ್ಲಿ ನೀಡುವ ಬಡ್ಡಿಯನ್ನೆ ನೀಡುತ್ತೇವೆ. ಇದರಿಂದ ಸಣ್ಣ ರೈತರಿಗೆ ಸಾಲ ನೀಡಲು ಅನುಕೂಲವಾಗುತ್ತದೆ. ಜೊತೆಗೆ ಸಹಕಾರ ಸಂಘದ ಬಲವರ್ಧನೆಗೆ ಕಾರಣವಾಗುತ್ತದೆ ಎಂದರು.
ಸಂಘದ ಕಾರ್ಯ ನಿರ್ವಹಣಾಧಿಕಾರಿ ಸುನಿಲ್ ವಾರ್ಷಿಕ ವರದಿ ವಾಚಿಸಿದರು.
ಈ ವೇಳೆ ಸಂಘದ ಉಪಾಧ್ಯಕ್ಷ ರಂಗನಾಥ್, ನಿರ್ದೇಶಕರಾದ ದೇವಕಿ ಪಾಣಿ ರಾಜಪ್ಪ, ಮಹೇಂದ್ರ, ಪಾಣಿ ಡಾಕಪ್ಪ, ಸತೀಶಗೌಡ, ಮಲ್ಲಿಕಾರ್ಜುನಗೌಡ, ವಿಜೇಂದ್ರ, ಜಗನ್ನಾಥ್, ವಿನಾಯಕ ಕಾನಡೆ, ಲಕ್ಷ್ಮಮ್ಮ, ರಾಧಮ್ಮ, ಡಿಸಿಸಿ ಬ್ಯಾಂಕ್ ಕ್ಷೇತ್ರಾಧಿಕಾರಿ ಕೃಷ್ಣನಾಯಕ್ ಇದ್ದರು.
ವರದಿ: ರಾಘವೇಂದ್ರ ಜಂಗಿನಕೊಪ್ಪ, ಸೊರಬ
ಜಿಎಸ್ಟಿ 2.0 ಅಡಿಯಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಮದ್ಯದ ಬೆಲೆಗಳು ಬದಲಾಗುತ್ತವೆಯೇ?
BREAKING: ನಾಳೆ ಮಧ್ಯಾಹ್ನಕ್ಕೆ ಜಾತಿಗಣತಿ ಪ್ರಶ್ನಿಸಿದ್ದ ಪಿಐಎಲ್ ವಿಚಾರಣೆ ಹೈಕೋರ್ಟ್ ಮುಂದೂಡಿಕೆ







