ಹೊಸಕೋಟೆ: ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ಮೂಲಕ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ರಾಜ್ಯದ ಇಂಧನ ಭವಿಷ್ಯವಾಗಿದೆ. ಇದರಿಂದ ಪಶ್ಚಿಮಘಟ್ಟದ ಪರಿಸರ ನಾಶವಾಗುತ್ತದೆ ಎಂಬ ವದಂತಿಗಳನ್ನು ನಂಬದೆ ಯೋಜನೆಗೆ ಸಹಕರಿಸುವಂತೆ ಇಂಧನ ಸಚಿವ ಕೆ.ಜೆ.ಜಾರ್ಜ್ ರಾಜ್ಯದ ಜನರಲ್ಲಿ ಮನವಿ ಮಾಡಿದ್ದಾರೆ.
ಬೆಂಗಳೂರು ಗ್ರಾಮಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಯಲಚಹಳ್ಳಿ ಕೆರೆಯಂಗಳದಲ್ಲಿ ‘ಕುಸುಮ್- ಸಿ’ ಯೋಜನೆಯಡಿ ಸ್ಥಾಪಿಸಿರುವ 7.3 ಮೆಗಾವ್ಯಾಟ್ ಸಾಮರ್ಥ್ಯದ ಸೌರವಿದ್ಯುತ್ ಉತ್ಪಾದನಾ ಘಟಕವನ್ನು ಗುರುವಾರ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಪರಿಸಕ್ಕೆ ಹಾನಿ ಇಲ್ಲ. ಅಲ್ಲಿ ಈಗಾಗಲೇ ಇರುವ ಎರಡು ಜಲಾಶಯಗಳನ್ನು ಬಳಸಿಕೊಂಡು ಯೋಜನೆ ಜಾರಿಗೊಳಿಸಲಾಗುತ್ತದೆ. ಹೊಸ ಜಲಾಶಯ ನಿರ್ಮಿಸುವ ಅಗತ್ಯ ಇಲ್ಲ. ಜತೆಗೆ, ಮೂಲ ಸೌಕರ್ಯವೂ ಲಭ್ಯವಿರುವುದರಿಂದ ಹೆಚ್ಚುವರಿ ಭೂಮಿಯ ಅವಶ್ಯಕತೆ ಇಲ್ಲ. ಯೋಜನೆಗೆ ಎಷ್ಟು ಅರಣ್ಯಭೂಮಿ ಬಳಸಿಕೊಳ್ಳಲಾಗುತ್ತದೆಯೋ ಅದಕ್ಕೆ ಪರ್ಯಾಯವಾಗಿ ಬೇರೆ ಕಡೆ ಅರಣ್ಯೀಕರಣಕ್ಕೆ ಭೂಮಿಯನ್ನು ನೀಡಲಾಗುತ್ತದೆ. ಅದೇ ರೀತಿ ಸ್ವಾಧೀನಪಡಿಸಿಕೊಂಡ ಖಾಸಗಿ ಭೂಮಿಗೂ ಸೂಕ್ತ ಪರಿಹಾರ ವಿತರಿಸಲಾಗುತ್ತದೆ ಎಂದು ತಿಳಿಸಿದರು.
ಯೋಜನೆಯಿಂದ ಪರಿಸರ ನಾಶವಾಗುತ್ತದೆ, ಸಮುದ್ರದ ಉಪ್ಪು ನೀರು ನದಿಗೆ ಸೇರುತ್ತದೆ, ವ್ಯಜೀವಿಗಳು ನಾಶವಾಗುತ್ತವೆ ಎಂದು ಆ ಭಾಗದ ಜನರಲ್ಲಿ ಕೆಲವರು ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ. ಆದರೆ, ಪರಿಸರದ ಮಲೆ ಅಂತಹ ಯಾವುದೇ ದುಷ್ಪರಿಣಾಮ ಉಂಟಾಗುವುದಿಲ್ಲ. ಯೋಜನೆ ಅನುಷ್ಠಾನಗೊಂಡ ಬಳಿಕ ಆರಂಭದಲ್ಲಿ ಒಂದು ಬಾರಿ 0.37 ಟಿಎಂಸಿ ನೀರನ್ನು ಪಡೆದುಕೊಂಡು ಅದನ್ನೇ ಪಂಪಿಂಗ್ ಮೂಲಕ ಮರುಬಳಕೆ ಮಾಡಿ ವಿದ್ಯುತ್ ಉತ್ಪಾದಿಸಲಾಗುತ್ತದೆ. ಉಳಿದಂತೆ ಹೆಚ್ಚುವರಿ ನೀರು ಬಳಸುವುದಿಲ್ಲ. ಇದರಿಂದಾಗಿ ಶರಾವತಿ ನದಿಯಲ್ಲಿ ಈಗಿರುವ ನೀರಿನ ಹರಿವಿನಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ. ಹೀಗಾಗಿ ಯೋಜನೆ ಜಾರಿಯಾದರೆ ಸಮುದ್ರದ ಉಪ್ಪು ನೀರು ನದಿ ಸೇರುತ್ತದೆ ಎಂಬುದು ತಪ್ಪು ಕಲ್ಪನೆ ಎಂದು ಸ್ಪಷ್ಟಪಡಿಸಿದರು.
ಪಂಪ್ಡ್ ಸ್ಟೋರೇಜ್ ಅನಿವಾರ್ಯ
ಭವಿಷ್ಯದಲ್ಲಿ ಪಂಪ್ಡ್ ಸ್ಟೋರೇಜ್ ಅನಿವಾರ್ಯವಾಗಿದೆ. ಪರಿಸರದ ದೃಷ್ಟಿಯಿಂದ ನವೀಕರಿಸಹುದಾದ ಮೂಲಗಳಿಂದ ಹೆಚ್ಚು ಉತ್ಪಾದನೆ ಮಾಡಲಾಗುತ್ತಿದ್ದು, ಹಗಲು ವೇಳೆ ಇದನ್ನು ಸಂಗ್ರಹಿಸಿ ಬೇಡಿಕೆ ಅವಧಿಯಲ್ಲಿ ಪೂರೈಸಲು ಸಂಗ್ರಹಣಾ ವ್ಯವಸ್ಥೆ ಬೇಕಾಗುತ್ತದೆ. ಬ್ಯಾಟರಿ ಸ್ಟೋರೇಜ್ ವ್ಯವಸ್ಥೆ ವೆಚ್ಚದಾಯಕ ಮಾತ್ರವಲ್ಲದೆ, ಬ್ಯಾಟರಿ ವಿಲೇವಾರಿ ಭವಿಷ್ಯದಲ್ಲಿ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ಭವಿಷ್ಯದಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಗೆ ಪಂಪ್ಡ್ ಸ್ಟೋರೇಜ್ ವ್ಯವಸ್ಥೆ ಅವಶ್ಯಕತೆ ಇದೆ. ಹೀಗಾಗಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅನುಷ್ಠಾನಕ್ಕೆ ಸಹಕರಿಸಬೇಕು ಎಂದು ಸಚಿವರು ಮನವಿ ಮಾಡಿದರು.
ಸಾಗರದಲ್ಲಿ ‘ಯೂಟ್ಯೂಬ್ ಚಾನಲ್’ ಹೆಸರಿನಲ್ಲಿ ಬ್ಲಾಕ್ ಮೇಲ್: ಸೂಕ್ತ ಕಾನೂನು ಕ್ರಮಕ್ಕೆ ‘ASP’ಗೆ ‘KUWJ’ ಮನವಿ








