ಬೆಳಗಾವಿ ಸುವರ್ಣಸೌಧ: ಉತ್ತರ ಕನ್ನಡ ಜಿಲ್ಲೆಯ ಶರಾವತಿ ಪಂಪ್ಡ್ ಸ್ಟೋರೇಜ್ ಜಲ ವಿದ್ಯುತ್ ಯೋಜನೆಯಿಂದ 2,000 ಮೆ.ವ್ಯಾ. ವಿದ್ಯುತ್ ಉತ್ಪಾದಿಸಲು ಉದ್ದೇಶಿಸಲಾಗಿದ್ದು, ಈ ಯೋಜನೆಯಿಂದ ಪರಿಸರಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ ಎಂಬುದಾಗಿ ಇಂಧನ ಸಚಿವ ಕೆ.ಜೆ ಜಾರ್ಜ್ ಸ್ಪಷ್ಟ ಪಡಿಸಿದ್ದಾರೆ.
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಶಾಸಕ ದಿನಕರ್ ಕೇಶವ್ ಶೆಟ್ಟಿ ಅವರ ಪ್ರಶ್ನೆಗೆ ಇಂಧನ ಸಚಿವರಾದ ಕೆ. ಜೆ. ಜಾರ್ಜ್ ಅವರ ಉತ್ತರಿಸಿದರು.
ಶರಾವತಿ ಪಂಪ್ಡ್ ಸ್ಟೋರೇಜ್ ಜಲ ವಿದ್ಯುತ್ ಯೋಜನೆಯಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಆರೋಪಿಸುವವರಿಗೆ ಮಾಹಿತಿಯ ಕೊರತೆ ಇದೆ. ಜನಪ್ರತಿನಿಧಿಗಳು, ಪರಿಸರವಾದಿಗಳ ತಕಾರರು ಬಂದಾಗ ಇದನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಿಸಿದ ತಜ್ಞರು, ಅಧಿಕಾರಿಗಳಿಂದ ಪರಿಶೀಲಿಸಿ, ಅವರಿಂದ ವರದಿ ಪಡೆದುಕೊಂಡಿದ್ದೇನೆ. ಈಗಲೂ ಶಾಸಕರಿಗೆ ಪರಿಸರ ಹಾನಿ ಕುರಿತಂತೆ ಯಾವುದೇ ಸಂಶಯಗಳಿದ್ದಲ್ಲಿ, ಅವುಗಳನ್ನು ಪರಿಹರಿಸುವ ಕಾರ್ಯ ಮಾಡಲಾಗುವುದು. ಈ ಯೋಜನೆಯಲ್ಲಿ ಸುರಂಗ ಮಾರ್ಗವನ್ನು ಮಾಡಲಾಗುವುದಿಲ್ಲ, ಬದಲಿಗೆ ಪೈಪ್‍ಲೈನ್ ಅಳವಡಿಸಿ, ಆ ಪ್ರದೇಶವನ್ನು ಪುನಃ ಮೊದಲಿನ ಸ್ಥಿತಿಗೆ ತಂದು ಅರಣ್ಯೀಕರಣ ಮಾಡಲಾಗುವುದು. ಇದಕ್ಕಾಗಿ ಕೇವಲ 25 ಎಕರೆ ಭೂಮಿ ಮಾತ್ರ ಅಗತ್ಯವಿದ್ದು, ಹೀಗಾಗಿ ಪರಿಸರದ ಮೇಲೆ ಯಾವುದೇ ಹಾನಿಯಾಗುವ ಕೆಲಸ ಮಾಡುವುದಿಲ್ಲ ಎಂದು ತಿಳಿಸಿದರು.
1964ರಲ್ಲಿ ಶರಾವತಿ ಜಲಾಶಯದ ಯೋಜನೆ ಮಾಡಿದಾಗ 1 ಲಕ್ಷ ಹೆಕ್ಟೇರ್ ಪ್ರದೇಶ ಮುಳುಗಡೆಯಾಗಿತ್ತು, ಈಗ ವರಾಹಿಯೂ ಸೇರಿದಂತೆ 1400 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಆಗುತ್ತಿದೆ. ಇದೀಗ ಉಪಯೋಗಿಸಿದ ನೀರನ್ನೇ ಪುನಃ ಪಂಪ್ ಮಾಡಿ, ಪುನಃ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಗೆ ಬಳಸಲು ಯೋಜನೆ ರೂಪಿಸಿದ್ದೇವೆ ಎಂದರು.
ಸೌರಶಕ್ತಿ, ಪವನಶಕ್ತಿ ಸೇರಿದಂತೆ ನವೀಕರಿಸಿದ ಇಂಧನ ಬಳಸುವ ಯೋಜನೆಗಳಲ್ಲಿ ನಮ್ಮ ರಾಜ್ಯ ದೇಶದಲ್ಲಿಯೇ 3ನೇ ಸ್ಥಾನದಲ್ಲಿದೆ. ಶೀಘ್ರವೇ ಮೊದಲನೆ ಸ್ಥಾನಕ್ಕೆ ಬರುವ ವಿಶ್ವಾಸವಿದೆ. ವರ್ಷದಿಂದ ವರ್ಷಕ್ಕೆ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಿದ್ದು, ನಮಗೆ ಹೆಚ್ಚಿನ ವಿದ್ಯುತ್‍ನ ಅಗತ್ಯವಿದೆ, ಕಳೆದ ವರ್ಷಕ್ಕಿಂತ ಈ ವರ್ಷ ಒಂದು ಸಾವಿರ ಮೆ.ವ್ಯಾ. ಹೆಚ್ಚಿನ ವಿದ್ಯುತ್ ಬೇಡಿಕೆ ಇದೆ. ಪವರ್ ಕಟ್ ಮಾಡದೆ ಕೃಷಿ ಪಂಪ್ ಸೆಟ್‍ಗಳಿಗೆ ವಿದ್ಯುತ್ ನೀಡುತ್ತಿದ್ದೇವೆ ಎಂಬುದಾಗಿ ಹೇಳಿದರು.
ಯುಜಿ ನೀಟ್: ಸ್ಟ್ರೇ ವೇಕೆನ್ಸಿ ಸುತ್ತು, ಆಪ್ಷನ್ಸ್ ದಾಖಲಿಸಲು ಡಿ.12 ಕೊನೆ ದಿನ
ಚಳಿಗಾಲದಲ್ಲಿಯೇ ಹೃದಯಾಘಾತ ಹೆಚ್ಚೇಕೆ? ಅಪಾಯಗಳನ್ನು ತಪ್ಪಿಸಲು ತಜ್ಞರು ನೀಡಿದ ಟಾಪ್ 5 ಸಲಹೆಗಳು!








