ಶಿವಮೊಗ್ಗ: ಬೆಂಗಳೂರಿಗೆ ಶರಾವತಿ ನದಿ ನೀರನ್ನು ಕುಡಿಯುವುದಕ್ಕೆ ಕೊಂಡೊಯ್ಯುವ ಬಗ್ಗೆ ವಿವಾದ ಉಂಟಾಗಿದೆ. ಈ ಬಗ್ಗೆ ಜನರ ಅಭಿಪ್ರಾಯವನ್ನು ಪಡೆದು, ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡುವುದಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ಸ್ಪಷ್ಟ ಪಡಿಸಿದ್ದಾರೆ.
ಇಂದು ಸಾಗರ ನಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದಂತ ಅವರು, ಯಾವುದೇ ಅಭಿವೃದ್ಧಿ ಯೋಜನೆ ಅಂದಾಗ ಅದಕ್ಕೆ ವಿರೋಧಗಳು ಬಂದೇ ಬರುತ್ತವೆ. ಈಗ ಶರಾವತಿ ನದಿ ನೀರನ್ನು ಬೆಂಗಳೂರಿಗೆ ಕುಡಿಯುವ ನೀರಿಗಾಗಿ ಕೊಂಡೊಯ್ಯುವುದಕ್ಕೂ ವಿರೋಧ ವ್ಯಕ್ತವಾಗಿದೆ. ನಾನು ಶರಾವತಿ ಕಣಿವೆಯ ಜನರ ಅಭಿಪ್ರಾಯವನ್ನು ಪಡೆದು, ಡಿಸಿಎಂ ಡಿ.ಕೆ ಶಿವಕುಮಾರ್ ಭೇಟಿಯಾಗಿ ಮಾಹಿತಿ ನೀಡಿ, ಮನವರಿಕೆ ಮಾಡುವುದಾಗಿ ಹೇಳಿದರು.
ಹೆದ್ದಾರಿ ಯೋಜನೆ ವೇಳೆ ಪರಿಸರ ನಾಶವಾಗಲಿಲ್ಲವೇ?
ತುಮಕೂರು ಹಾಗೂ ಕಾರವಾರ ನಡುವೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕಾಗಿ ಲಕ್ಷಾಂತರ ಮರಗಳ ಮಾರಣ ಹೋಮವೇ ನಡೆಯುತ್ತಿದೆ. ಇದು ಪರಿಸರ ನಾಶವಲ್ಲವೇ? ಇದರ ಬಗ್ಗೆ ಮಾತನಾಡದವರು ಶರಾವತಿ ನದಿ ನೀರನ್ನು ಕುಡಿಯೋ ನೀರಿಗೆ ಕೊಂಡೊಯ್ಯುವುದಕ್ಕೆ ಪರಿಸರ ನಾಶವಾಗಲಿದೆ ಎಂಬುದಾಗಿ ಹೇಳುತ್ತಿದ್ದಾರೆ ಎಂಬುದಾಗಿ ಗರಂ ಆದರು. ಪರಿಸರ ನಾಶ ಆಗುತ್ತೆ ಎಂಬ ಕಾರಣಕ್ಕೆ ಯೋಜನೆಗೆ ವಿರೋಧ ಸರಿಯಲ್ಲ ಎಂದರು.
ಮೇಕೆದಾಟು ಯೋಜನೆಗೆ ಅನುಮತಿ ಸಿಕ್ಕಿದ್ದರೇ ಶರಾವತಿ ನದಿ ನೀರು ಯೋಜನೆಗೆ ಮುಂದಾಗುತ್ತಿರಲಿಲ್ಲ
ಕೇಂದ್ರ ಸರ್ಕಾರದಿಂದ ಮೇಕೆದಾಟು ಯೋಜನೆಗೆ ಅನುಮತಿ ನೀಡಲಾಗಿಲ್ಲ. ಈ ಹಿನ್ನಲೆಯಲ್ಲಿ ಶರಾವತಿ ನದಿ ನೀರನ್ನು ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಸಲುವಾಗಿ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿದೆ. ಶರಾವತಿ ನದಿ ನೀರು ಯೋಜನೆ ದುಡ್ಡು ಹೊಡೆಯುವುದಕ್ಕಾಗಿ ಎನ್ನುತ್ತಿದ್ದಾರೆ. ಅದೆಲ್ಲ ಶುದ್ಧ ಸುಳ್ಳು. ಜನರಿಗೆ ಕುಡಿಯುವ ನೀರು ಒದಗಿಸಿಕೊಡುವುದಕ್ಕಾಗಿಯೇ ಆಗಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಸ್ಪಷ್ಟ ಪಡಿಸಿದರು.
ಅಡಿಕೆ ಕೊಳೆ ರೋಗಕ್ಕೆ ಪರಿಹಾರ ಒದಗಿಸುವುದಾಗಿ ಭರವಸೆ
ಅಡಿಕೆಗೆ ಮಳೆ ಹೆಚ್ಚಾಗಿದ್ದರಿಂದ ಕೊಳೆ ರೋಗ ಬಂದಿದೆ. ನಾನು ವಿವಿಧೆಡೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಅನೇಕ ಕಡೆಯಲ್ಲಿ ಕೊಳೆ ರೋಗದಿಂದ ಅಡಿಕೆ ನೆಲಕ್ಕೆ ಸುರಿದು, ಹಾಳಾಗಿ ಹೋಗಿದೆ. ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರಿಹಾರಕ್ಕೆ ಅಡಿಕೆ ಬೆಳೆಗಾರರ ಸಂಘ ನನ್ನನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ. ನಾನು ಈಗಾಗಲೇ ಕೃಷಿ ಹಾಗೂ ತೋಟಗಾರಿಕೆ ಸಚಿವರೊಂದಿಗೆ ಮಾತನಾಡಿದ್ದೇನೆ. ಅವರು ಒಟ್ಟಾಗಿ ಸಿಎಂ ಸಿದ್ಧರಾಮಯ್ಯ ಭೇಟಿಯಾಗಿ ಮನವರಿಕೆ ಮಾಡೋಣ ಅಂತ ತಿಳಿಸಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಕೃಷಿ, ತೋಟಗಾರಿಕೆ ಸಚಿವರೊಂದಿಗೆ ಭೇಟಿಯಾಗಲಿದ್ದೇನೆ. ಅಡಿಕೆಗೆ ಕೊಳೆ ರೋಗ ಬಂದು ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಮನವರಿಕೆ ಮಾಡಲಾಗುತ್ತದೆ. ಈ ಹಿಂದೆ ಪರಿಹಾರವನ್ನು ಅಡಿಕೆ ಕೊಳೆರೋಗಕ್ಕೆ ನೀಡಲಾಗಿದೆ. ಈ ಬಾರಿಯೂ 25 ಸಾವಿರ ಪರಿಹಾರ ನೀಡುವಂತೆ ಮನವಿ ಮಾಡಲಾಗುತ್ತದೆ. ನಾನು ರೈತರ ಧ್ವನಿಯಾಗಿ ಕೆಲಸ ಮಾಡಿ, ಅವರಿಗೆ ಪರಿಹಾರ ಕೊಡಿಸುವ ಕೆಲಸ ಮಾಡಲಿದ್ದೇನೆ ಎಂಬ ಭರವಸೆ ನೀಡಿದರು.
ಮಳೆಯಿಂದ ಹಾನಿಗೆ ಪರಿಹಾರ ವಿತರಣೆ
ಸಾಗರ, ಹೊಸನಗರ ತಾಲ್ಲೂಕಿನಲ್ಲಿ ಮಳೆ, ನೆರೆಯಿಂದ ಉಂಟಾದಂತ ಹಾನಿಗೆ ಪರಿಹಾರ ನೀಡಲಾಗಿದೆ. ಮನೆ ಕುಸಿತವಾಗಿ, ಅದಕ್ಕೆ ದಾಖಲೆ ಇಲ್ಲದೇ ಇದ್ದರೂ 1 ಲಕ್ಷ ಪರಿಹಾರವನ್ನು ನೀಡಲಾಗಿದೆ. ಈಗಾಗಲೇ ಮಳೆಹಾನಿ ಹಾನಿಗೆ ಪರಿಹಾರ ವಿತರಣೆ ಮಾಡಲಾಗಿದ್ದು, ಇನ್ನೂ ಅನೇಕರಿಗೆ ಶೀಘ್ರವೇ ಪರಿಹಾರ ನೀಡುವುದಾಗಿ ತಿಳಿಸಿದರು.
ಕಲ್ಮನೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸೂಪರ್ ಸೀಡ್
ಕಲ್ಮನೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಪಿಗ್ಮಿ ಹಣ, ಜನರು ಹೂಡಿಕೆ ಮಾಡಿದಂತ ಹಣ ಅವ್ಯವಹಾರ ಆಗಿರುವ ಬಗ್ಗೆ ಇತ್ತೀಚಿಗೆ ನನ್ನ ಗಮನಕ್ಕೆ ಬಂದಿದೆ. ಆದರೇ ನನ್ನ ಬಳಿ ಈವರೆಗೆ ಯಾರು ಹೀಗೆ ಸಮಸ್ಯೆ ಆಗಿದೆ. ಸರಿ ಮಾಡಿ, ನಮ್ಮ ಹಣ ಕೊಡಿಸಿ ಎಂಬುದಾಗಿ ಮನವಿ ಮಾಡಲು ಬಂದಿಲ್ಲ. ನಾನು ಸಹಕಾರ ಸಂಘದ ನಿರ್ದೇಶಕ ಎಂದು ಬರುವುದು ಬೇಡ, ಶಾಸಕನಾಗಿಯಾದರೂ ಭೇಟಿಯಾಗಿ ಸಂತ್ರಸ್ತರು ಸಮಸ್ಯೆ ಹೇಳಬೇಕು ಅಲ್ವ ಅಂತ ಹೇಳಿದರು.
ಯಾವುದೋ ಒಂದು ಪಕ್ಷದ ವತಿಯಿಂದ ಕಲ್ಮನೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬಳಿಯಲ್ಲಿ ಅವ್ಯವಹಾರ ಖಂಡಿಸಿ, ಗ್ರಾಹಕರ ಹಣ ವಾಪಾಸ್ ಕೊಡಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ನನ್ನ ವಿರುದ್ಧವೂ ಘೋಷಣೆಯನ್ನು ಕೂಗಿದ್ದಾರೆ. ಆದರೇ ಕಲ್ಮನೆ ಸಹಕಾರ ಸಂಘದ ಅವ್ಯವಹಾರಕ್ಕೂ ನನಗೂ ಸಂಬಂಧವಿಲ್ಲ. ಅದರಲ್ಲಿ ನನ್ನ ಪಾತ್ರವೂ ಇಲ್ಲ. ಜನರ ದುಡ್ಡು ಎಲ್ಲಿಯೂ ಹೋಗಲ್ಲ. ಯಾರೇ ಇದರ ಹಿಂದಿದ್ದರೂ ಅವರನ್ನು ಸುಮ್ಮನೇ ಬಿಡಲ್ಲ. ಜರ ದುಡ್ಡು ವಾಪಾಸ್ ಕೊಡಿಸುವಂತ ಕೆಲಸ ಮಾಡುತ್ತೇನೆ. ಕಲ್ಮನೆ ಕೃಷಿ ಪತ್ತಿನ ಸಹಕಾರ ಸಂಘವನ್ನು ಸೂಪರ್ ಸೀಡ್ ಮಾಡಿ, ಸಂಬಂಧಪಟ್ಟವರ ಆಸ್ತಿ ಮುಟ್ಟುಗೋಲು ಹಾಕಿಕೊಂಡು, ಸಂತ್ರಸ್ತರ ಹಣ ವಾಪಾಸ್ ಕೊಡಿಸುವಂತ ಕೆಲಸ ಮಾಡುವುದಾಗಿ ಘೋಷಿಸಿದರು.
ಕಾಲೇಜಿಗೆ ಸದಸ್ಯತ್ವ ನೋಂದಣಿಗೆ ಹೋಗಿದ್ದು ತಪ್ಪು, ಅಂತವರ ವಿರುದ್ಧ ಕ್ರಮಕ್ಕೆ ಡಿವೈಎಸ್ಪಿಗೆ ಸೂಚನೆ
ಇಂದಿರಾ ಗಾಂಧಿ ಕಾಲೇಜಿಗೆ ಕಾಂಗ್ರೆಸ್ ಪಕ್ಷದವರು ಎಂಬುದಾಗಿ ಹೇಳಿಕೊಂಡು ಯಾರೋ ಹೋಗಿದ್ದಾರೆ ಎಂಬುದಾಗಿ ನನ್ನ ಗಮನಕ್ಕೆ ಬಂದಿದೆ. ಕಾಲೇಜಿಗೆ ಹೀಗೆ ಪಕ್ಷದ ಸದಸ್ಯತ್ವಕ್ಕೆ ಹೋಗುವುದು ತಪ್ಪು. ಇದು ಸರಿಯಾದದ್ದೂ ಅಲ್ಲ. ಈ ಬಗ್ಗೆ ನನ್ನ ಗಮನಕ್ಕೆ ಬಂದ ಕೂಡಲೇ ಹಾಗೆ ಯಾರೇ ಹೋಗಿದ್ದರೂ ಅಂತವರ ವಿರುದ್ಧ ಎಫ್ಐಆರ್ ಹಾಕಿ ಅಂತ ಡಿವೈಎಸ್ಪಿಗೆ ಸೂಚಿಸಿರುವುದಾಗಿ ತಿಳಿಸಿದರು.
ಬಿಜೆಪಿಯವರಿಗೆ ನಾಚಿಕೆ ಆಗ್ಬೇಕು
ಅಲ್ಲ ಇಂದಿರಾ ಗಾಂಧಿ ಕಾಲೇಜಿಗೆ ಕಾಂಗ್ರೆಸ್ ಸದಸ್ಯತ್ವಕ್ಕೆ ಹೋಗಿದ್ದಾರೆ ಎಂಬುದಾಗಿ ಡಿವೈಎಸ್ಪಿಗೆ ದೂರು ನೀಡಿದ್ದೀರಲ್ಲ. ನಿಮ್ಮೊಷ್ಟು ನೀಚರು ಬೇರಾರು ಇಲ್ಲ. ಈ ಹಿಂದೆ ಮೋದಿ ಕಾರ್ಯಕ್ರಮಕ್ಕೆ ಶಾಲಾ ಮಕ್ಕಳನ್ನು ಕೊಂಡೊಯ್ದವರು ನೀವು. ನಿಮಗೆ ನೈತಿಕತೆ ಇದ್ಯಾ ಅಂತ ಶಾಸಕ ಬೇಳೂರು ಗೋಪಾಲಕೃಷ್ಣ ವಾಗ್ಧಾಳಿ ನಡೆಸಿದರು.
ಸಿಎಂ ಸಿದ್ಧರಾಮಯ್ಯ ಪರ 136 ಶಾಸಕರಿದ್ದೇವೆ
ಸಿಎಂ ವಿರುದ್ಧದ ಮುಡಾ ಹಗರಣ ಕುರಿತಂತೆ ಕನ್ನಡ ನ್ಯೂಸ್ ನೌ ಸಂಪಾದಕ ವಸಂತ ಬಿ ಈಶ್ವರಗೆರೆ ಕೇಳಿದಂತ ಪ್ರಶ್ನೆಗೆ ಉತ್ತರಿಸಿದಂತ ಅವರು, ಮುಡಾ ಹಗರಣದ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯ ಯಾವ ತೀರ್ಪು ನೀಡುತ್ತರೋ ಕಾದು ನೋಡಬೇಕು. ಅದೇನೇ ಆದರೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಪರವಾಗಿ 136 ಶಾಸಕರು ಇದ್ದೇವೆ ಎಂಬುದಾಗಿ ತಿಳಿಸಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
‘ಆಪರೇಷನ್ ಕಮಲ’ದ ಮೂಲಕ ಸರ್ಕಾರ ಅಸ್ಥಿರಗೊಳಿಸಲು ‘ಬಿಜೆಪಿ’ ಪ್ರಯತ್ನ: ಸಿಎಂ ಸಿದ್ಧರಾಮಯ್ಯ ಗಂಭೀರ ಆರೋಪ