ದಾವಣಗೆರೆ : ಮಾಜಿ ಸಚಿವರು ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ; ಶಾಮನೂರು ಶಿವಶಂಕರಪ್ಪನವರು ನಿಧನರಾಗಿದ್ದು ಅವರ ಶಿವಗಣಾರಾಧನೆ ಹಾಗೂ ನುಡಿನಮನ ಕಾರ್ಯಕ್ರಮವನ್ನು ಶಾಮನೂರು ಕುಟುಂಬದಿಂದ ಡಿಸೆಂಬರ್ 26 ರಂದು ಬೆಳಗ್ಗೆ 10.15 ರಿಂದ ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ಆಯೋಜಿಸಲಾಗಿದ್ದು ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು, ಹಿರಿಯ ಸಚಿವರು ಮತ್ತು ವಿವಿಧ ಮಠಾಧೀಶರು ಸೇರಿದಂತೆ ಗಣ್ಯ ವ್ಯಕ್ತಿಗಳು ಭಾಗವಹಿಸುವುದರಿಂದ ಅಗತ್ಯ ಸಿದ್ದತೆ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.
ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕರಾದ ಡಾ; ಬಿ.ಆರ್.ರವಿಕಾಂತೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಶಿವಗಣರಾಧನೆ ಹಾಗೂ ನುಡಿನಮನ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಜಿಲ್ಲಾಧಿಕಾರಿ ಅವರು ಮಾತನಾಡಿದರು.
ಡಾ; ಶಾಮನೂರು ಶಿವಶಂಕರಪ್ಪನವರ ಶಿವಗಣಾರಾಧನೆ ಹಾಗೂ ನುಡಿನಮನ ಸಮಾರಂಭದಲ್ಲಿ ರಾಜ್ಯಸಭಾ ಸದಸ್ಯರು ಹಾಗೂ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ಸೇರಿದಂತೆ ಮಾಜಿ ಮುಖ್ಯಮಂತ್ರಿಗಳು, ಗಣ್ಯಾತಿ ಗಣ್ಯರು ಸೇರಿದಂತೆ ಸಚಿವ ಸಂಪುಟದ ಸಚಿವರು, ಸಂಸದರು, ಶಾಸಕರು ಸೇರಿದಂತೆ ಶಾಮನೂರು ಕುಟುಂಬದ ಸಂಬಂಧಿಕರು ಸೇರಿದಂತೆ ಅಪಾರ ಬಂಧುಗಳು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಯಾವುದೇ ತೊಂದರೆಯಾಗದಂತೆ ಸೂಕ್ತವಾದ ಬಂದೋಬಸ್ತ್ ವ್ಯವಸ್ಥೆಯ ಜೊತೆಗೆ ಸುಗಮ ಸಂವಹನ ಸೇರಿದಂತೆ ಕುಟುಂಬದ ಸಹಕಾರದೊಂದಿಗೆ ಸೂಕ್ತವಾದ ವ್ಯವಸ್ಥೆಯನ್ನು ಕಲ್ಪಿಸಿಕೊಡಲು ಮತ್ತು ಆಗಮಿಸುವ ಜನರಿಗೆ ಸಹಾಯಕ್ಕಾಗಿ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಮಾಡಬೇಕಿದ್ದು ಎಲ್ಲಾ ಇಲಾಖೆ ಅಧಿಕಾರಿಗಳು ಆಯಾ ಇಲಾಖೆಗೆ ಸಂಬಂಧಿಸಿದ ಸಚಿವರು, ಶಾಸಕರು, ಅಧಿಕಾರಿಗಳನ್ನು ಕಾರ್ಯಕ್ರಮಕ್ಕೆ ಕರೆತರುವ ಕೆಲಸದ ಜೊತೆಗೆ ವಹಿಸಿದ ಜವಾಬ್ದಾರಿಯನ್ನು ಯಾವುದೇ ಲೋಪವಾಗದಂತೆ ಕ್ರಮ ವಹಿಸಲು ಸೂಚನೆ ನೀಡಿದರು.
ಪೂರ್ವ ವಲಯ ಪೊಲೀಸ್ ಮಹಾ ನಿರೀಕ್ಷಕರಾದ ಡಾ; ಬಿ.ಆರ್.ರವಿಕಾಂತೇಗೌಡ ಅವರು ನಾವೆಲ್ಲರೂ ವಿವಿಧ ಇಲಾಖೆಯಾದರೂ ಸೇವೆ ಒಂದೆ. ಕಾರ್ಯಕ್ರಮದ ಸಂದರ್ಭದಲ್ಲಿ ಸಣ್ಣಪುಟ್ಟ ಲೋಪವಾಗದಂತೆ ಕಾರ್ಯ ನಿರ್ವಹಿಸಬೇಕು. ವಿವಿಧ ಇಲಾಖೆಗಳ ಮಧ್ಯೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಿದಾಗ ಯಾವುದೇ ಲೋಪವಾಗುವುದಿಲ್ಲ. ಕಾರ್ಯಕ್ರಮಗಳು ಚನ್ನಾಗಿ ನಡೆದಾಗ ಅಧಿಕಾರಿಗಳಿಗೆ ಗೌರವ ಸಿಗಲಿದ್ದು ಕುಟುಂಬಕ್ಕೂ ಗೌರವ ಲಬಿಸಲಿದ್ದು ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯನಿರ್ವಹಿಸೋಣ ಎಂದರು.
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಮಾತನಾಡಿ ಕಲ್ಲೇಶ್ವರ ರೈಸ್ ಮಿಲ್ ಆವಣರಣದಲ್ಲಿ ಡಾ; ಶಾಮನೂರು ಶಿವಶಂಕರಪ್ಪನವರ ನುಡಿನಮನ ಕಾರ್ಯಕ್ರಮ ನಡೆಯುತ್ತಿರುವುದರಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ಜೊತೆಗೆ ರಸ್ತೆ ಮಾರ್ಗದ ಬದಲಾವಣೆಯನ್ನು ಕೈಗೊಳ್ಳಲಾಗುತ್ತದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್, ಶಾಮನೂರು ಶಿವಶಂಕರಪ್ಪನವರ ಪುತ್ರರಾದ ಮಾಜಿ ಜಿಲ್ಲಾ ಪರಿಷತ್ ಅಧ್ಯಕ್ಷರಾದ ಎಸ್.ಎಸ್.ಬಕ್ಕೇಶ್, ಉದ್ಯಮಿ ಎಸ್.ಎಸ್.ಗಣೇಶ್, ಅಥಣಿ ವೀರಣ್ಣ, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.








