ಕೆಎನ್‌ಎನ್‌ಸಿನಿಮಾಡೆಸ್ಕ್: ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ರುದ್ರಶಿವ ನಿರ್ದೇಶನದ `ಶಭ್ಬಾಷ್’ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಅವರು, ತಮ್ಮ ಶಿಷ್ಯನ ಚಿತ್ರಕ್ಕೆ ಕ್ಲಾಪ್ ಮಾಡುವ ಮೂಲಕ ವಿದ್ಯುಕ್ತ ಚಾಲನೆ ನೀಡಿದ್ದಾರೆ. ಶ್ರೀ ಬಂಡೆ ಮಹಾಕಾಳಿ ಅಮ್ಮನವರ ಸನ್ನಿಧಾನದಲ್ಲಿ ಈ ಮುಹೂರ್ತ ಸಮಾರಂಭ ಅರ್ಥವತ್ತಾಗಿ ನೆರವೇರಿದೆ. ಇದೇ ಸಂದರ್ಭದಲ್ಲಿ ` ಶಭ್ಬಾಷ್’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಕೂಡಾ ಅನಾವರಣಗೊಂಡಿದೆ.
ಈ ಸಂದರ್ಭದಲ್ಲಿ `ಶಭ್ಬಾಷ್’ ಕುರಿತಾದ ಒಂದಷ್ಟು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದೆ. ಪ್ರಧಾನವಾಗಿ ಈ ಹಂತದಲ್ಲಿ ನಿರ್ದೇಶಕ ರುದ್ರಶಿವ ಶೀರ್ಷಿಕೆಯ ಒಳಾರ್ಥವನ್ನು ಸಮರ್ಥವಾಗಿ ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ಸಾಮಾನ್ಯವಾಗಿ ಮಹತ್ತರವಾದುದನ್ನು ಸಾಧಿಸಿದಾಗ, ಮೆಚ್ಚುವಂತೆ ನಡೆದುಕೊಂಡಾಗ ಶಭ್ಬಾಷ್ ಗಿರಿಯ ಮೂಲಕ ಮೆಚ್ಚಿಕೊಳ್ಳಲಾಗುತ್ತೆ. ಹಾಗಾದರೆ, ಈ ಸಿನಿಮಾ ನಾಯಕ ಶಭ್ಬಾಷ್ ಅನ್ನಿಸಿಕೊಳ್ಳುವಂಥಾ ಯಾವ ಕೆಲಸ ಮಾಡುತ್ತಾನೆ? ಯಾವ ಥರದ ಕಥೆ ಇದರ ಸುತ್ತ ಚಲಿಸುತ್ತದೆಂಬುದು ಈ ಸಿನಿಮಾ ಜೀವಾಳ.
ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರಂತೆ. ಶಿವಮಣಿ, ಅಯ್ಯಪ್ಪ ಶರ್ಮಾ, ಪಲ್ಲಕ್ಕಿ ರಾಧಾಕೃಷ್ಣರಂಥಾ ನಿರ್ದೇಶಕರೊಂದಿಗೆ ಕಾರ್ಯ ನಿರ್ವಹಿಸಿದ್ದ ರುದ್ರಶಿವ, ಓಂ ಸಾಯಿಪ್ರಕಾಶ್ ನಿರ್ದೇಶನದ ಗಂಗ ಎಂಬ ಚಿತ್ರದಲ್ಲಿಯೂ ಕೆಲಸ ಮಾಡಿದ್ದರು. ಈ ಮೂಲಕ ಸಾಯಿಪ್ರಕಾಶ್ ಅವರನ್ನು ಗುರುವೆಂದೇ ಪರಿಭಾವಿಸಿಕೊಂಡಿದ್ದರು. ಇದೀಗ ಓಂ ಸಾಯಿಪ್ರಕಾಶ್ ತಮ್ಮ ಶಿಷ್ಯನ ಮೊದಲ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಿ ಶುಭ ಹಾರೈಸಿದ್ದಾರೆ. ಈ ಚಿತ್ರದಲ್ಲಿ ಶರತ್ ನಾಯಕನಾಗಿ ನಟಿಸಿದ್ದಾರೆ. ನಿಸರ್ಗ ನಾಯಕಿಯಾಗಿ ಜೊತೆಯಾಗಿದ್ದಾರೆ. ಈಗಾಗಲೇ `ಕ’ ಮತ್ತು `ಮಳೆಬಿಲ್ಲು’ ಎಂಬೆರಡು ಸಿನಿಮಾಗಳಲ್ಲಿ ನಾಯಕರಾಗಿ ನಟಿಸಿದ್ದ ಶರತ್, ಸುದೀರ್ಘ ಕಾಲಾವಧಿಯ ನಂತರ ಶಭ್ಬಾಷ್ ಮೂಲಕ ನಾಯಕನಾಗಿ ಮರಳುತ್ತಿದ್ದಾರೆ. ಎಲ್ಲ ತಯಾರಿಗಳನ್ನೂ ಮುಗಿಸಿಕೊಂಡಿರುವ ಚಿತ್ರತಂಡ ಇಂದಿನಿಂದಲೇ ಚಿತ್ರೀಕರಣಕ್ಕೂ ಚಾಲನೆ ನೀಡಿದೆ. ಮೊದಲ ಹಂತದಲ್ಲಿ ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಹದಿನೈದು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಆ ನಂತರ ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಭಾಗದಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
ವಿಶೇಷವೆಂದರೆ, ಚಿತ್ರೀಕರಣ ಶುರುವಾಗುವ ಮುನ್ನವೇ ಶಭ್ಬಾಷ್ ನ ಆರು ಹಾಡುಗಳನ್ನು ರೂಪಿಸಲಾಗಿದೆ. ಈ ಆರೂ ಹಾಡುಗಳಿಗೆ ಮ್ಯಾಡಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಆಂಜನೇಯನ ಕುರಿತಾದ ಹಾಡಿಗೆ ಶಂಕರ್ ಮಹಾದೇವನ್ ಧ್ವನಿಯಾಗಿದ್ದಾರೆ. ರವೀಂದ್ರ ಸೊರಗಾವಿ ಹಾಗೂ ಶಮಿತಾ ಮಲ್ನಾಡ್ ಕಂಠಸಿರಿಯಲ್ಲಿ ಒಂದು ಗೀತೆ, ಇಂದೂ ನಾಗರಾಜ್ ಹಾಗೂ ವ್ಯಾಸರಾಜ್ ಕಾಂಬಿನೇಷನ್ ನಲ್ಲಿ ಒಂದು ಹಾಡು, ವಿಜಯ್ ಪ್ರಕಾಶ್ ಮತ್ತು ಅನುರಾಧ್ ಭಟ್ ಧ್ವನಿಯಲ್ಲಿ ಮತ್ತೊಂದು ಸುಮಧುರ ಗೀತೆ, ಜೋಗಿ ಪ್ರೇಮ್, ನವೀನ್ ಸಜ್ಜು ಕೂಡ ಶಭ್ಬಾಷ್ ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರಂತೆ.